ಚೀನೀ ಜಾನಪದ

ಚೀನದಲ್ಲಿ ಜಾನಪದ ಒಂದು ಶಕ್ತಿಯುತವಾದ ಹಾಗೂ ಜೀವಂತವಾದ ಸಾಮಾಜಿಕ ಬಲವಾಗಿದೆ. ಜಾನಪದ ಸಂಶೋಧಕನಿಗೆ ಚೀನಾದಲ್ಲಿ ಪರಂಪರಾನುಗತ, ಪದ್ಧತಿ, ನಂಬಿಕೆ ಹಾಗೂ ಆಚರಣೆಗಳ ಬಗ್ಗೆ ಪ್ರಾಚೀನ ಕಾಲದಿಂದಲೂ ಉಳಿದು ಬಂದಿರುವ ಬಹಳಷ್ಟು ಸಾಮಾಗ್ರಿ ಭೌಗೋಳಿಕ ವ್ಯತ್ಯಯಗಳೊಡನೆ ಲಿಖಿತ ದಾಖಲೆಗಳಲ್ಲೂ ಹೇರಳವಾಗಿ ಸಿಗುತ್ತದೆ. 

	ಕ್ರಿ.ಪೂ. 5ನೆಯ ಶತಮಾನಕ್ಕೆ ಹಿಂದೆ ಚೀನೀ ಜಾನಪದ ಶ್ರೀಮಂತರ ಜ್ಞಾನ ಮತ್ತು ಜನಸಾಮಾನ್ಯರ ಜ್ಞಾನ ಎಂಬುದಾಗಿ ವರ್ಗೀಕೃತವಾಗಿತ್ತು. ದಾರ್ಶನಿಕ ಪಂಥಗಳ ಉಗಮ, ವಿವಿಧ ಧಾರ್ಮಿಕ ಪದ್ಧತಿಗಳ ಆಚರಣೆ ಹಾಗೂ ರಾಜಕೀಯ ಪರಿಸ್ಥಿತಿ —ಇವೆಲ್ಲವುಗಳಿಂದ ಚೀನೀ ಜಾನಪದ ಅಲ್ಲಿಂದೀಚೆಗೆ ಬಹುಮಟ್ಟಿಗೆ ಮಾರ್ಪಟ್ಟಿದೆ. ಆದರೆ ಅದರ ಮುಖ್ಯ ರೂಪರೇಖೆಗಳೆಲ್ಲ ಪ್ರಾಚ್ಯ ಏಷ್ಯದ ನಂಬಿಕೆಗಳ ಮತ್ತು ಆಚರಣೆಗಳ ಆಧಾರವನ್ನೇ ಹೊಂದಿದೆ. ಈ ಲಕ್ಷಣವನ್ನು ಚೀನಾ ಈವರೆಗೂ ರಕ್ಷಿಸಿಕೊಂಡು ಬಂದಿದೆ. ಚೀನಾ ವಿವಿಧ ಸಂಸ್ಕøತಿಗಳಿಂದ ಮತ್ತು ಅನೇಕ ಜನಾಂಗಗಳಿಂದ ಕೂಡಿದ ರಾಷ್ಟ್ರ; ಚೀನದ ಇಂದಿನ ಜನರ ಮೂಲಪುರುಷರು ಯಾರೆಂಬುದನ್ನು ನಿರ್ದಿಷ್ಟವಾಗಿ ಹೇಳುವಂತಿಲ್ಲ. ಅವರ ದಾಖಲೆಗಳು ಅವಿಚ್ಛಿನ್ನವಾಗಿ ಬಂದಿರುವುದರಿಂದ ಅವರ ಸಾಮಾಜಿಕ ಆಚರಣೆಗಳು ಹಾಗೂ ನಂಬಿಕೆಗಳು ಪಾಶ್ಚಾತ್ಯರ ಆಚರಣೆ ಹಾಗೂ ನಂಬಿಕೆಗಳನ್ನು ಹೋಲುತ್ತವೆ ಎಂಬ ಶಂಕೆಗೆ ಅವಕಾಶವಿದೆ. ವಿವಿಧ ಜಾನಪದಗಳು ಪರಸ್ಪರ ಹೋಲುವುದಕ್ಕೆ ಅವು ಎಲ್ಲೆಡೆ ವ್ಯಾಪಿಸಿಕೊಂಡಿರುವುದೇ ಕಾರಣವೆಂಬ ವ್ಯಾಪ್ತಿವಾದ ಮತ್ತು ಕಲ್ಪನೆಗಳು ಕ್ರೋಡೀಕರಿಸುವ ವಿಧಾನಗಳನ್ನು ಪರಿಶೋಧಿಸುವ ಪಾಶ್ಚಾತ್ಯರು ಚೀನಿಯರ ನಂಬಿಕೆಗಳನ್ನು ಮಾದರಿಗಳನ್ನಾಗಿಟ್ಟುಕೊಳ್ಳಲು ಪ್ರಯತ್ನಿಸಿದ್ದಾರೆ. 

	ಚೀನೀ ಜಾನಪದದ ವ್ಯಾಪ್ತಿ, ಅದು ವ್ಯಾಪಿಸಿರುವ ಪ್ರದೇಶ ಯಾವುದು, ಅದರ ಗಾತ್ರವೇನು ಎಂಬ ಬಗ್ಗೆ ಇರುವ ಅನಿರ್ದಿಷ್ಟತೆ, ಚೀನದಲ್ಲಿ ಆಗಿರುವ ವಿವಿಧ ಸಂಸ್ಕøತಿಗಳ ಸೇರ್ಪಡೆ, ವಿವಿಧ ಜನಾಂಗಗಳು ಯಾವ ಅಡ್ಡಿ ಆತಂಕವೂ ಇಲ್ಲದೆ ಆಚರಣೆ ಮತ್ತು ನಂಬಿಕೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿರುವುದು, ಅಧಿಕಾರ ಮತ್ತು ಗೌರವಸ್ಥಾನ ಪಡೆದ ಪಂಡಿತವರ್ಗದ ಪ್ರಾಬಲ್ಯ, ಜಾನಪದ ಸಾಮಾಗ್ರಿಗಳನ್ನು ವ್ಯವಸ್ಥೆಗೊಳಿಸಿರುವ ಪುರೋಹಿತವರ್ಗದ ಸಾಂಪ್ರದಾಯಿಕ ನಿಲುವು-ಮುಂತಾದವು ಚೀನೀ ಜಾನಪದದ ಅಧ್ಯಯನಕ್ಕಿರುವ ಅಡಚಣೆಗಳಾಗಿವೆ. ಚೀನೀಯರ ಲಿಖಿತ ಭಾಷೆಯ ಒಡೆತನ ಪಂಡಿತ ವರ್ಗದವರದ್ದಾದ್ದರಿಂದ ಅವರು ಶುದ್ಧ ಜಾನಪದವನ್ನು ಶಿಷ್ಟಗೊಳಿಸುವ ಸಾಧ್ಯತೆಯೇ ವಿಶೇಷವಾಗಿದೆ. ಇತರರ ಮೂಢನಂಬಿಕೆಗಳನ್ನು ಎತ್ತಿ ತೋರಲು ಮತಪ್ರಚಾರಕರು ಸಂಗ್ರಹಿಸಿದ ವಸ್ತು ಉಪಯುಕ್ತವಾಗಿ ಕಂಡರೂ ಚೀನದ ವಿವಿಧ ಭಾಗಗಳಲ್ಲಿನ ಪದ್ಧತಿ ಮತ್ತು ನಂಬಿಕೆಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಅದು ತೋರಿಸುವಂತಿಲ್ಲ. 

	ಚೀನಿ ಜಾನಪದದ ಪ್ರಾರಂಭ ಕಾಲದ ವಿವರಗಳ ಬಗ್ಗೆ ಸಂಗ್ರಹವಾಗಿರುವ ಮಾಹಿತಿಗಳು ತೃಪ್ತಿಕರವಾಗಿಲ್ಲ. ಕ್ರಿ. ಪೂ. ಸು. 1100-221 ರ ಅವಧಿಯ ಮೊದಲು ಚೀನೀ ಚರಿತ್ರೆ ಚೌ ಸಂತತಿಯ ಕಾಲದಲ್ಲಿ ರಚಿತವಾಗಿದ್ದು ಕ್ರಿ.ಪೂ. 206-ಕ್ರಿ.ಶ. 221 ರ ಚಿನ್ ಸಂತತಿಯ ಕಾಲದಲ್ಲಿ ನಾಶವಾಯಿತು. ಆದ್ದರಿಂದ ಪ್ರಾಚೀನ ಇತಿಹಾಸ ಹಾಗೂ ಜನ ಜೀವನದ ಬಗ್ಗೆ ಊಹಾಪೋಹಗಳು ಹೆಚ್ಚಾಗಿವೆ ; ಪುರಾತತ್ವ ಶೋಧನೆಗಳಿಂದ ದೊರೆಯುವ ಮಾಹಿತಿಗಳು ಅವನ್ನು ಸಮರ್ಥಿಸಬೇಕಾಗಿವೆ. ಹಾನ್ ಸಂತತಿಯ ಚರಿತ್ರಕಾರ ಸುಮಚೈಯೆನ್ ಪ್ರಾರಂಭದ ಕಾಲದ ಇತಿಹಾಸದ ಬಗ್ಗೆ ವಿವರಗಳನ್ನು ನೀಡಿದ್ದಾನೆ. ಅವನ ಪ್ರಕಾರ ದೇವಲೋಕದ 12 ಜನ ಸಾಮ್ರಾಟರು ವಿಶ್ವದ ಮೊದಲ ಅರಸರು. ಅವರು ತಲಾ 18,000 ವರ್ಷಗಳಂತೆ ಒಟ್ಟು 1,98,000 ವರ್ಷಗಳ ಕಾಲ ಆಳಿದರು. ಭೂಲೋಕದ ಒಂಭತ್ತು ಮಂದಿ ಸಾಮ್ರಾಟರು 45,000 ವರ್ಷಗಳ ಕಾಲ ಮಾನವಕುಲವನ್ನು ಆಳಿದರು. ಸುಮಚೈಯನ್ ತಿಳಿಸುವ ಉಳಿದ 16 ಮಂದಿ ಸಾಮ್ರಾಟರ ಬಗ್ಗೆ ಮಾಹಿತಿಗಳು ದೊರತಿಲ್ಲ. ಇವರ ತರುವಾಯ ಸಾಹಸ ವೀರರೂ ಲಲಿತಕಲೆಗಳನ್ನು ಮತ್ತು ಕುಶಲಕಲೆಗಳನ್ನು ಫೂಷಿ ಮತ್ತು ಷೆನ್ ನುಂಗ್ ಎಂಬಿಬ್ಬರು ಬರುತ್ತಾರೆ. ಅವರಿಬ್ಬರಿಗೂ ಸರ್ಪಶರೀರ ಹಾಗೂ ಮಾನವ ಶಿರಗಳಿದ್ದವು. ಭೂಮಿಯನ್ನು ಮೊದಲು ಉತ್ತವ ಷೆನ್‍ನುಂಗ್. ಹ್ಯಾಂಗ್‍ಡೀ ಎಂಬಾತ ಮಾನವ; ಇವನು ಅನಾಗರಿಕ ಜನರಿಗೆ ರಾಜ್ಯಾಡಳಿತ, ಕುಶಲಕಲೆ, ನಡೆನುಡಿ, ದೇವತೆ, ಪರ್ವತ, ನದಿ ಮುಂತಾದವುಗಳಿಗೆ ಯಜ್ಞಯಾಗಾದಿಗಳನ್ನು ಮಾಡುವ ಹಾಗೂ ಬಲಿ ನೀಡುವ ವಿಧಾನಗಳನ್ನು ಕಲಿಸಿಕೊಟ್ಟ.; ಯು ಎಂಬಾತ ಸ್ಥಾಪಿಸಿದ ಷೈಯಾ ಸಂತತಿ (ಕ್ರಿ.ಪೂ. ಸು. 2205-1557) ಬಹುಶಃ ಪೂರ್ವ ಚೀನೀ ಸಂತತಿಯಾಗಿರಬಹುದು. ಯು 13 ವರ್ಷಗಳ ಕಾಲ ನದಿಗಳ ಪ್ರವಾಹವನ್ನು ತಡೆಗಟ್ಟಲು ಕಾರ್ಯನಿರತನಾದ. ಆಗ ಅವನು ತನ್ನ ಸಂಸಾರದ ಯೋಗಕ್ಷೇಮದ ಕಡೆಗೂ ಗಮನ ಕೊಡಲಿಲ್ಲವೆಂದು ಪ್ರತೀತಿ ಇದೆ. ಅವನೊಬ್ಬ ನಿಷ್ಠ ಅರಸ.

	ಚೀನದಲ್ಲಿ ಜಾನಪದವನ್ನು ರಕ್ಷಿಸಿಕೊಂಡು ಬರುವ ಪ್ರವೃತ್ತಿ ಕಂಡುಬರುತ್ತದೆ. ಈ ಕಾರಣದಿಂದ ಚೀನೀಯರು ಪ್ರಾಚೀನ ನಂಬಿಕೆಗಳನ್ನು ಆಧುನಿಕ ಕಾಲದವರೆಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಹೀಗೆ ಅವನ ಯಿನ್-ಯಾಂಗ್ ಭವಿಷ್ಯ ಜ್ಞಾನ 'ವೂ ಪಂಥಗಳು, ಪುರೋಹಿತ ದೊರೆಗಳು ಮತ್ತು ಅವರ ದೇವಲೋಕ, ಭೂಲೋಕ, ಭೂಮಿ ಮತ್ತು ಧಾನ್ಯಗಳು ಹಾಗೂ ಪಿತೃಪೂಜೆ ಇವುಗಳೆಲ್ಲ ಪ್ರಾರಂಭ ಕಾಲದಿಂದಲೂ ಬಂದವು. ಯಿನ್-ಯಾಂಗ್ ಭವಿಷ್ಯಜ್ಞಾನ ತರುವಾಯದ ಕಾಲದಲ್ಲಿ ತಾಓ ಪಂಥದವರಿಂದ ವಿಸ್ತಾರಗೊಂಡಿತು ; ಸಮತೋಲನ ಜೀವಿತದ ಧರ್ಮವೆಂಬ ಚೀನಿ ಸಂಸ್ಕøತಿಯ ಕಲ್ಪನೆಯಿಂದ ಅದು ಬಂದದ್ದು; ಈ ನಂಬಿಕೆ ಸೈನ್ (ಜ್ಯಾ) ವಕ್ರರೇಖೆಯಿಂದ ದ್ವಿಭಾಗಿಸಲ್ಪಟ್ಟ ವೃತ್ತ. ಅದು ವಿಶ್ವದ ವಾಸ್ತವ ಮತ್ತು ಅವಾಸ್ತವ ಬಲಗಳ ನಡುವಣ ಸಮತೋಲನ ; ಸ್ತ್ರೀ ಮತ್ತು ಪುರುಷರನ್ನು ಪ್ರತಿನಿಧಿಸುವ ಸಂಕೇತ ಭೂಮ್ಯಾಕಾಶ; ಹೀಗೆ ಸಂಕೇತಗೊಂಡ ತತ್ತ್ವ ಲಾಮಾವಾದದಲ್ಲಿ ಮುಖ್ಯಸ್ಥಾನ ಹೊಂದಿದೆ. ಅಲ್ಲಿ ಸಂಭೋಗ ಅತ್ಯಂತ ಗರಿಷ್ಠ ಸಾಮರಸ್ಯ  ಹಾಗೂ ಸಮತೋಲನ. ತಾಓ ಪಂಥದಲ್ಲಿಯೂ ಇದೇ ಕಲ್ಪನೆ ಇದೆ. ಸ್ತ್ರೀ ಮತ್ತು ಪುರುಷರಿಗೆ ಸಂಬಂಧಪಟ್ಟಂತೆ ಶುಭ ಮತ್ತು ಆಶುಭ ಕಾರ್ಯಗಳನ್ನು ಯಾವ ದಿನಗಳಲ್ಲಿ ಆಚರಿಸಬಹುದೆಂಬ ಪದ್ಧತಿ ಸಹ ಈ ಸಮತೋಲನ ವ್ಯವಸ್ಥೆಗೆ ಸಂಬಂಧಪಟ್ಟದ್ದು.

	ಷಾಂಗ್ ಸಂತತಿಯ ಸಾಮ್ರಾಟರ ಕಾಲದಲ್ಲಿ ಭವಿಷ್ಯ ಜ್ಞಾನ ಶ್ರೀಮಂತರ ಪಂಥಕ್ಕೆ ಸೇರಿದ ವಿಷಯವಾಗಿತ್ತು. ಆಗಿನ ಕಾಲದಲ್ಲಿ ಜೋಯಿಸರು ಮೂಳೆಗಳ ಮೇಲೆ ಮತ್ತು ಆಮೆಯ ಚಿಪ್ಪಿನ ಮೇಲೆ ಭಾವಲಿಪಿಗಳನ್ನು ಬರೆದು ಬೆಂಕಿಯಲ್ಲಿ ಕಾಯಿಸಿ ಮೂಳೆ ಮತ್ತು ಅವುಗಳ ಮೇಲೆ ಕಂಡುಬಂದ ಸೀಳುಗಳ ಆಧಾರದ ಮೇಲೆ ಯಜ್ಞ, ಪ್ರಯಾಣ, ಯುದ್ಧ —ಇಂಥ ವಿಷಯಗಳ ಬಗ್ಗೆ ಭವಿಷ್ಯ ನುಡಿಯುತ್ತಿದ್ದರು. ಚೀನೀಯರಿಗೆ ಲಿಪಿ ಮತ್ತು ಸಂಕೇತಗಳೆಂದರೆ ಈಗಲೂ ಪೂಜ್ಯ ಭಾವನೆ ಇದೆ. ಭವಿಷ್ಯದ ವಿಷಯಗಳನ್ನೊಳಗೊಂಡ, ಮೂಳೆಗಳ ಮೇಲಣ ಭಾವಲಿಪಿಗಳನ್ನು ಅರ್ಥ ಮಾಡುವುದು ಚೀನೀ ಪುರೋಹಿತರ ಕೆಲಸ.

	ವೂ ಪುರೋಹಿತರು ಶ್ರೀಮಂತ ಹಾಗೂ ಜಾನಪದ ಹಾಗೂ ಜಾನಪದ ಪಂಥಗಳೆರಡರಲ್ಲೂ ಪ್ರವೀಣರು. ವಿದ್ಯಾಪೀಠಗಳ ಮೂಲಕ ಅವರ ಜ್ಞಾನ ಪ್ರಸಾರವಾಗುತ್ತಿತ್ತು. ಯೋಗ ಸಮಾಧಿ, ಸಂಗೀತ, ನೃತ್ಯ-ಇವು ಅವರ ಮತಾಚರಣೆಗಳಾಗಿದ್ದವು. ಇವು ಚೀನೀ ನಾಟಕ ಕಲೆಗೆ ಬುನಾದಿಯಾಯಿತೆಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಈ ಆಚರಣೆಗಳು ಮಂಗೋಲಿಯ, ಸೈಬೀರಿಯ ಮತ್ತು ಇತರ ಕಡೆ ಕಂಡುಬಂದಿರುವ ಆಚರಣೆಗಳನ್ನು ಹೋಲುತ್ತವೆ.

	ಯಿನ್-ಯಾಂಗ್ ಕಲ್ಪನೆ ಭವಿಷ್ಯಜ್ಞಾನ ಮತು ವೃತ್ತಿನಿರತ ವೂ ಪುರೋಹಿತ ವರ್ಗ-ಇವೆಲ್ಲ ಷಾಂಗ್ ಸಂಸ್ಕøತಿಯ ಭಾಗಗಳಾಗಿದ್ದುವು. ಕ್ರಿ.ಪೂ. 1000 ದಲ್ಲಿ ಅರಸ ಪುರೋಹಿತ ವ್ಯವಸ್ಥೆ, ಪುರುಷ ವಂಶೀಕರ ಪೂಜೆ, ತಾರಾಮಂಡಲದ ಪೂಜೆ ರೂಡಿಗೆ ಬಂದವು.

	ಪುರೋಹಿತ ಅರಸರು ಸ್ವರ್ಗವನ್ನು ಶಮನ ಮಾಡುವ ಮುಖ್ಯ ಕರ್ತವ್ಯವನ್ನು ಹೊಂದಿದ್ದರು. ಸ್ವರ್ಗಲೋಕದ ಪುತ್ರನಾದ ಸಮ್ರಾಟ ಮಾತ್ರ ಸ್ವರ್ಗಲೋಕಕ್ಕೆ ಪೂಜೆ ಸಲ್ಲಿಸಲು ಅರ್ಹತೆ ಹೊಂದಿದ್ದ, ಸಾಮಂತರು ಮತ್ತು ಶ್ರೀಮಂತರು ಸಾಮಾನ್ಯ ಪೂಜೆಗಳನ್ನು ಮಾಡುತ್ತಿದ್ದರು. ಸ್ವರ್ಗಕ್ಕೆ ಯಾಗವನ್ನು ವ್ಯವಸಾಯ ವರ್ಷದ ಮೊದಲ ದಿನ ಆಚರಿಸುತ್ತಿದ್ದರು. ಚಾಂದ್ರಮಾನದಲ್ಲಿ ಇದು ವಸಂತಕಾಲದ ಪ್ರಾರಂಭದ ದಿನ. ಈ ಉತ್ಸವ ಸಮಯದಲ್ಲಿ ಸಮ್ರಾಟನ ಅಧಿಕೃತ ಪಂಚಾಂಗ ಹೊರಡುತ್ತಿತ್ತು. ಅದರಲ್ಲಿ ಆ ವರ್ಷಕ್ಕೆ ಸಂಬಂಧಿಸಿದ ವ್ಯವಸಾಯ, ಲೌಕಿಕ ವ್ಯವಹಾರ, ಗೃಹಕೃತ್ಯ ವಿಚಾರಗಳಿರುತ್ತಿದ್ದವು. ಸಮ್ರಾಟನ ಮಳಿಗೆಯಿಂದ ಧಾನ್ಯಗಳನ್ನು ಹಂಚಲಾಗುತ್ತಿತ್ತು ; ಬೆಳೆಗಳ ಸಮ್ರಾಟನೆನಿಸಿ ಕೊಳ್ಳುತ್ತಿದ್ದ ; ಅವನು ಹಸಿರು ಮತ್ತು ಹಳದಿ ವಸ್ತ್ರಗಳನ್ನು ಧರಿಸುತ್ತಿದ್ದ.

	ಪಿತೃಪೂಜೆ ಆಧುನಿಕ ಚೀನದಲ್ಲಿ ಸಹ ಮುಖ್ಯವೆನಿಸಿರುವ ಸಂಸ್ಕಾರ. ಚೀನೀಯರು ಮಾನವನಿಗೆ ಎರಡು ಆತ್ಮಗಳಿವೆ ಎಂದು ನಂಬಿದ್ದರು. ಮೊದಲನೆಯದು ಪೊ ಆತ್ಮ (ಪ್ರಾಣಿ ಆತ್ಮ) ; ಗರ್ಭಧಾರಣೆಯ ಕಾಲದಲ್ಲಿ ಗರ್ಭವನ್ನು ಸೇರುತ್ತದೆ. ಎರಡನೆಯ ಹನ್ ಆತ್ಮ ; ಶಿಶು ಹುಟ್ಟಿದ ಕೂಡಲೇ ಅದರ ದೇಹವನ್ನು ಸೇರಿಕೊಳ್ಳುತ್ತದೆ. ಇದು ಅವರ ಕಲ್ಪನೆ. ಭೌತಿಕ ಆತ್ಮವಾದ ಪೊ ವ್ಯಕ್ತಿ ಮರಣ ಹೊಂದಿದ ಮೇಲೆ ಅವನ ದೇಹವನ್ನು ಅನುಸರಿಸುತ್ತದೆ. ಸತ್ತವನ ವಂಶಜರ ಪೂಜೆ ಪುರಸ್ಕಾರಗಳಿಂದ ಅದು ಸಂತೃಪ್ತವಾಗುತ್ತದೆ. ದೇಹ ಸಮಾಧಿಯಲ್ಲಿ ನಶಿಸಿದಂತೆಲ್ಲ ಈ ಆತ್ಮವೂ ನಶಿಸುತ್ತ ಬರುತ್ತದೆ. ವಂಶಜನ ಪೂಜೆ ಮತ್ತು ಬಲಿಗಳಿಲ್ಲದೆ ಹೋದರೆ ಈ ಆತ್ಮ ಪ್ರೇತವಾಗಿ ವಂಶಕ್ಕೆ ಅಪಾಯವೆಸಗಬಹುದು. ಆಧ್ಯಾತ್ಮಿಕ ಆತ್ಮವಾದ ಹನ್ ಸ್ವರ್ಗವನ್ನು ಮುಟ್ಟಿ ತನ್ನ ವಂಶಜರ ಹಿತಾಸಕ್ತಿಗಳನ್ನು ಕಾಪಾಡುತ್ತದೆ. ಒಂದು ವಂಶವೇ ನಾಶವಾದ ಪಕ್ಷದಲ್ಲಿ ಆ ವಂಶದ ಸತ್ತವರ ಆತ್ಮಗಳು ಪೂಜೆಗಳಿಲ್ಲದೆ ದೆಸೆಗೆಟ್ಟು ಅಲೆದಾಡಬಹುದು.

	ಚೀನಿಯರು ಬಲಿ ನೀಡುವ ಪದ್ಧತಿ ಇತರ ಸಂಸ್ಕøತಿಗಳಲ್ಲಿನ ಬಲಿ ವಿಧಾನಗಳನ್ನೇ ಹೋಲುತ್ತದೆ. ಪ್ರಾಚೀನ ಕಾಲದಲ್ಲಿ ಸತ್ತ ಶ್ರೀಮಂತನ ಹಿಂದೆ ಅವನ ಪರವಾಗಿ ಬಲಿಕೊಟ್ಟ ಅವನ ಮಡದಿಯರ ಮತ್ತು ಪರಿವಾರದವರ ಆತ್ಮಗಳೂ ಅವನ ಸೇವೆಗಾಗಿ ಹೋಗುತ್ತಿದ್ದವು. ಆಧುನಿಕ ಚೀನದಲ್ಲಿ ನರಬಲಿಗೆ ಬದಲಾಗಿ ಸತ್ತವನ ಹೆಂಡಿರನ್ನು ಮತ್ತು ಪರಿವಾರದವರನ್ನು ಪ್ರತಿನಿಧಿಸುವ ಕಾಗದಗಳನ್ನು ಸುಡುವ ಪದ್ಧತಿ ಇದೆ. ಪ್ರಾಚೀನ ಚೀನದಲ್ಲಿ ನದಿಗೆ ಪ್ರತಿವರ್ಷವೂ ಸುಂದರ ಕನ್ನಿಕೆಯನ್ನು ವಿವಾಹ ಮಾಡಿಕೊಡುವ ಪದ್ಧತಿ ಇತ್ತು. ಆಕೆಯನ್ನು ಮದುವಣಗಿತ್ತಿಯಂತೆ ಶೃಂಗರಿಸಿ ನಿಷೇಕ ಶಯ್ಯೆಯೊಡನೆ ಹಡಗಿನಲ್ಲಿ ತೇಲಿ ಬಿಡುತ್ತಿದ್ದರು. ನದಿಗೆ ಆಹುತಿಯಾಗಬೇಕಾದವರನ್ನು ಉಳಿಸುವುದು ಯುಕ್ತವಲ್ಲವೆಂಬ ನಂಬಿಕಯೇ ನದಿಯಲ್ಲಿ ಮುಳುಗುವವರನ್ನು ರಕ್ಷಿಸಲು ಈಗಲೂ ಚೀನಿಯರು ಅಂಜುವುದಕ್ಕೆ ಕಾರಣವಾಗಿದೆ. ವನದೇವತೆಗಳಿಗೆ ಮತ್ತು ಪರ್ವತಗಳಿಗೆ ಪೂಜೆ ಸಲ್ಲಿಸುವ ಪದ್ಧತಿಯೂ ಚೀನದಲ್ಲಿತ್ತು.

	ವಿಚಾರವಾದಿಗಳು ಹಳೆಯ ಪದ್ಧತಿಗಳನ್ನು ನಾಶಮಾಡದೆ ರಕ್ಷಿಸಿಕೊಂಡು ಬರುವ ಪ್ರಯತ್ನ ಮಾಡಿದ್ದಾರೆ. ದಾರ್ಶನಿಕರು, ಇತಿಹಾಸಕಾರರು ಹಾಗೂ ಧರ್ಮಶಾಸ್ತ್ರಜ್ಞರು ಈ ವಿಷಯದಲ್ಲಿ ಆಸಕ್ತಿ ವಹಿಸಿದ್ದಾರೆ. ಚೌ ಸಂತತಿಯ ಸಮ್ರಾಟರ ಕಾಲದಲ್ಲಿ ಪ್ರಾಚೀನ ವೃತ್ತಿನಿರತ ಪುರೋಹಿತರ ಪಾಂಡಿತ್ಯವನ್ನು ಸಂಪಾದಿಸಿಕೊಂಡ ವಿದ್ವಾಂಸರು ಪ್ರಬಲರಾಗಿದ್ದರು. ಸಾಮ್ರಾಜ್ಯದ ವಿಘಟನೆಯಿಂದ ನಡೆನುಡಿ ಮತ್ತು ನೈತಿಕ ಮಟ್ಟಗಳು ಶಿಥಿಲವಾಗಿ ನೂರಾರು ಪಂಥಗಳು ಹುಟ್ಟಿಕೊಳ್ಳುವುದಕ್ಕೆ ಅವಕಾಶವಾಯಿತು. ವ್ಯತಿರಿಕ್ತವಾದ ಕಲ್ಪನೆಗಳು ಮೂಡಿದವು, ಕಾನ್‍ಫ್ಯೂಷನ್ ಮತ್ತು ತಾಓ ಧರ್ಮಪಂಥಗಳು ಚೀನದಲ್ಲಿ ಹೊಸ ಭಾವನೆಗಳನ್ನು ಮೂಡಿಸಿದವು.

	ಪ್ರಾಚೀನ ಚೀನದ ಪದ್ಧತಿಗಳಿಗೆ ಹಿಂದಿರುಗಬೇಕೆಂದು ಕಾನ್‍ಫ್ಯೂಷಸ್ ಬೋಧಿಸಿದ. ಪರಿಣಾಮವಾಗಿ ಹಳೆಯ ಪದ್ಧತಿಗಳ ಬಗ್ಗೆ ಸಂಶೋಧನೆ, ಐತಿಹ್ಯ ಹಾಗೂ ಧರ್ಮಾಚರಣೆಗಳಿಗೆ ಸಂಬಂಧವಾದ ಸಂಹಿತೆ-ಇವು ಕಾನ್‍ಫ್ಯೂಷಸನ ನಿಯಮಾವಳಿಗಳಿಗೆ ಸಂಬಂಧಿಸಿದ ಐದು ಅಭಿಜಾತ ಗ್ರಂಥಗಳಲ್ಲಿ ಶೇಖರಿಸಲ್ಪಟ್ಟಿತು. ಭವಿಷ್ಯ ವಿಜ್ಞಾನಕ್ಕೆ ಸಂಬಂಧಿಸಿದ ಚಿಂಗ್ ಗ್ರಂಥ, ಚರಿತ್ರೆಗೆ ಸಂಬಂಧಿಸಿದ ಷು ಚಿಂಗ್, ಧರ್ಮಾಚರಣೆಗಳನ್ನು ವಿವರಿಸುವ ಲೀಚಿ ಮತ್ತು ಚೌ ಲಿ, ಷಿಹಿಚಿನ್ ಕಾವ್ಯ ಮತ್ತು ಲೂ ಇತಿಹಾಸ-ಈ ಐದು ಗ್ರಂಥಗಳು ಚೀನೀ ಜಾನಪದದ ಸಂಗ್ರಹಗಳು. ಇವುಗಳಲ್ಲಿ ಕ್ರಿ.ಪೂ. 5ನೆಯ ಶತಮಾನದ ಪ್ರಾಚೀನ ಚೀನೀಯರ ಅಭಿಪ್ರಾಯಗಳಿವೆ. ಕೆಲವು ವಿಷಯಗಳ ಮೂಲ ಸಂಶಯಾಸ್ಪದವಾಗಿದೆ. ಕಾನ್‍ಫ್ಯೂಷನನ ಪಂಥ 2,000 ವರ್ಷಗಳಿಂದ ಜನಪ್ರಿಯವಾಗಿದ್ದರೂ ಅವನ ಗ್ರಂಥಗಳಲ್ಲಿನ ಪ್ರಾಚೀನ ನಂಬಿಕೆಗಳು ಬದಲಾವಣೆಗೆ ಗುರಿಯಾಗಿವೆ. ಏನೇ ಆಗಲಿ ಈ ಗ್ರಂಥಗಳು ಅರ್ಥ ಮಾಡಲು ಪ್ರಯತ್ನಿಸುವ ಜಾನಪದ ತಜ್ಞನಿಗೆ ಸಂಪದ್ಯುಕ್ತ ವಿಷಯಗಳನ್ನೊದಗಿಸುತ್ತವೆ. ಹೀಗಿದ್ದರೂ ಕಾನ್‍ಫ್ಯೂಷಸ್ ಪಂಥಕ್ಕಿಂತ ತಾಓ ಪಂಥ ಚೀನೀ ಜಾನಪದದ ರಕ್ಷಣೆಗೆ ಹೆಚ್ಚು ಬೆಂಬಲ ನೀಡಿದೆ. ಈ ಪಂಥ 2,000 ವರ್ಷಗಳಿಂದ ಜನಪ್ರಿಯ ನಂಬಿಕೆಗಳಿಗೆ ಹಾಗೂ ಮೂಢನಂಬಿಕೆಗಳಿಗೆ ಎಡೆಕೊಟ್ಟಿದೆ. ಆ ತತ್ತ್ವದಲ್ಲಿ ಮಾನುಷ ಮತ್ತು ಅತಿಮಾನುಷ ಶಕ್ತಿಗಳ ನಡುವಣ ಸಾಮರಸ್ಯ ಕಾಣುತ್ತದೆ. ಅಲ್ಲಿಗೆ ಧರ್ಮಾಚರಣೆಯ ಪರಿಧಿಯಲ್ಲಿ ದೈಹಿಕ ವ್ಯಾಯಾಮಕ್ಕೆ ಹೆಚ್ಚು ಅವಕಾಶವಿದೆ ; ಭವಿಷ್ಯ ಜ್ಞಾನದಿಂದ ಘಟನೆಗಳನ್ನು ತಿಳಿಯಬಹುದೆಂಬ ನಂಬಿಕೆ ಇದೆ. ಮಂತ್ರಿಸಿದ ತಾಯಿತದಿಂದ ಕೆಟ್ಟದ್ದನ್ನು ನಿವಾರಿಸಿಕೊಳ್ಳಬಹುದೆಂಬ ವಾದವಿದೆ. ಹುಟ್ಟಿನಿಂದ ಸಾವಿನ ವರೆವಿಗೆ ಅನುಸರಿಸುವ ವಿವಿಧ ಸಂಸ್ಕಾರಗಳು ಈ ಪಂಥದ ಬೋಧನೆಗಳಲ್ಲಿವೆ. ಈ ಎರಡು ಪಂಥಗಳ ಜೊತೆಗೆ ವಿದೇಶೀ ಧರ್ಮವಾದ ಬೌದ್ಧಧರ್ಮವನ್ನೂ ಚೀನೀಯರು ಆಹ್ವಾನಿಸಿ ಬೋಧಿಸತ್ತ್ವನನ್ನು ಭಗವಂತನೆಂದು ಭಾವಿಸಿದರು.

	ಕಾನ್‍ಫ್ಯೂಷಸ್ ಪಂಥ ಹಾಗೂ ಮತ್ತಿತರ ಪಂಥಗಳು ಹುಟ್ಟಿಕೊಂಡ ಮೇಲೆ ಮೊದಲೇ ಇದ್ದ ಪುರಾಣಗಳಿಗೆಲ್ಲ ಧರ್ಮಗ್ರಂಥಗಳಲ್ಲಿ ಪುನರ್ ವಿವರಣೆ ಕೊಡಲಾಯಿತು. ಕೆಲವು ದೇವತೆಗಳು ಮತ್ತು ಪೌರಾಣಿಕ ವ್ಯಕ್ತಿಗಳನ್ನು ಅಮೂರ್ತ ತತ್ತ್ವಗಳಿಗೆ ಹೊಂದಿಸಲಾಯಿತು. ಉಳಿದವರನ್ನು ಪುರಾಣಾವರಣದ ಚಾರಿತ್ರಿಕ ವ್ಯಕ್ತಿಗಳನ್ನಾಗಿ ಮಾಡಲಾಯಿತು. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಪುರೋಹಿತ ಪ್ರಭುತ್ವಕ್ರಮ ಅತಿಮಾನುಷ ಜಗತ್ತಿನ ಮೇಲೆ ಪ್ರಭಾವ ಬೀರುವಂತೆ ಮಾಡಲಾಯಿತು. ಅನೇಕ ಆರ್ಷೇಯ ಪುರಾಣಗಳು ನಷ್ಟವಾಗಿವೆ. ಉಳಿದವು ಸಾಂದರ್ಭಿಕ ಉಲ್ಲೇಖಗಳಲ್ಲಿ ಲೌಕಿಕ ಬರೆಹಗಳಲ್ಲಿ ಸೇರಿಕೊಂಡಿರುವ ಕೆಲವೊಂದು ಜನಪದ ಸಂಪ್ರದಾಯದ ಅವಶೇಷಗಳಾಗಿ ಮಾತ್ರ ಉಳಿದು ಬಂದಿವೆ. ಹಲವಾರು ಮೂಲನಿವಾಸಿ ಸಂಸ್ಕøತಿಗಳ ಒಟ್ಟು ಸೇರುವಿಕೆಯಿಂದಾಗಿ ಚೀನದ ಪೌರಾಣಿಕ ಸಂಪ್ರದಾಯಗಳಲ್ಲಿ ವ್ಯಾಪಕವಾದ ಭಿನ್ನತೆ ಕಂಡುಬರುತ್ತದೆ. ವಿಶೇಷ ಲಕ್ಷಣ ಮಾದರಿಯ ಪುರಾಣ ಆಶಯಗಳು ಕಾಣಸಿಗುತ್ತವೆ.

	ಪ್ರಾಚೀನ ಚೀನದ ಸೃಷ್ಟಿಗೆ ಸಂಬಂಧಿಸಿದ ಪುರಾಣಗಳ ಸಂಖ್ಯೆ ತೀರ ಕಡಿಮೆ. ಸ್ವರ್ಗ ಮತ್ತು ಮತ್ರ್ಯಗಳ ಪ್ರತ್ಯೇಕತೆಯನ್ನು ಕುರಿತು ವಿಸ್ತಾರವಾದ ಸಂಪ್ರದಾಯವೊಂದು ಕಂಡುಬರುತ್ತದೆ. ಈ ಸಂಪ್ರದಾಯ 'ಜಗತ್ತು ಮತ್ತು ತತ್ತಿಯ ಆಶಯಕ್ಕೆ ಸಂಬಂಧಿಸಿದುದು. ಇದಲ್ಲದೆ ಸೃಷ್ಟಿಪೂರ್ವದ ಅವ್ಯವಸ್ಥಿತ ಕಲ್ಪನೆಗೆ ಕೆಲವೊಂದು ಸಾಕ್ಷ್ಯಾಧಾರವಿದ್ದು, ಅದರಿಂದ ಸ್ವರ್ಗ ಮತ್ತು ಮತ್ರ್ಯಗಳು ಬೇರೆಯಾಗಿದ್ದವೆಂದು ತಿಳಿದುಬರುತ್ತದೆ. ಮೂಲತಃ ಸ್ವರ್ಗವಾಸಿಗಳಾದ ದೇವತೆಗಳು ಹಾಗೂ ಮತ್ರ್ಯವಾಸಿಗಳಾದ ಮಾನವರು ಪರಸ್ಪರ ಸೇರುತ್ತಿರಲಿಲ್ಲ ; ಆದರೆ ಮಾಂತ್ರಿಕರ ಮತ್ತು ದೈವಿಕರ ಕುಟುಂಬಗಳ ಪ್ರಯತ್ನದ ಫಲವಾಗಿ ಈ ಪ್ರತ್ಯೇಕತೆ ಸಡಿಲಗೊಂಡು ಮಾನವರು ಸ್ವರ್ಗಕ್ಕೆ, ದೇವತೆಗಳು ಮತ್ರ್ಯಕ್ಕೆ ಹೋಗಿ ಬರುವಂತಾಯಿತು. ಈ ಪರಿಸ್ಥಿತಿಗೆ ಕೊನೆಯುಂಟಾದುದು ಅಧಿದೇವತೆಯ ಸ್ಥಾನವನ್ನು ಆಶಿಸಿದ ದೇವತೆಗಳಲ್ಲೊಬ್ಬನಿಂದ ಮತ್ತು ಅವನ ಕ್ರಾಂತಿಗೆ ನೆರವಾದ ಭ್ರಷ್ಟ ಮಾನವ ಜೀವಿಗಳಿಂದ, ಇದಾದ ಮೇಲೆ ಮಾನವರು ಸ್ಬರ್ಗಕ್ಕೆ ಹೋಗದಂತಾಯಿತು. ಹಾಗೆಯೇ ದೇವತೆಗಳು ಮತ್ರ್ಯಕ್ಕೆ ಬರದಂತಾಯಿತು.

	ಭೂಮಿ ಮತ್ತು ಲೌಕಿಕ ವಿಷಯದ ಮಾದರಿಯನ್ನು ಕುರಿತು ಹಲವಾರು ಇತರ ಸಂಪ್ರದಾಯಗಳಿವೆ. ಮಾನವ ಮುಖವೂ ಸರ್ಪಶರೀರವೂ ರಕ್ತವರ್ಣವೂ ಆದ ಚೂ-ಇನ್ ಎಂದು ಹೆಸರಾದ ಪೌರಾಣಿಕ ಜೀವಿ ತನ್ನ ಕಣ್ಣುಗಳನ್ನು ತೆರೆದಾಗ ಹಗಲಾಗುವುದೆಂದೂ ಮುಚ್ಚಿದಾಗ ಇರುಳಾಗುವುದೆಂದೂ ಬೇಸುಗೆ ಮತ್ತು ಚಳಿಗಾಲಗಳು ಅದರ ಉಸಿರಾಟದ ಭಿನ್ನ ಸಾಮಥ್ರ್ಯವನ್ನವಲಂಬಿಸಿ ಉಂಟಾಗುತ್ತವೆಂದೂ ನಂಬಲಾಗಿದೆ.

	ಪನ್-ಕು ಪುರಾಣದ ಪ್ರಕಾರ ಸ್ವರ್ಗ ಮತ್ತು ಮತ್ರ್ಯಗಳ ಪ್ರತ್ಯೇಕತೆ ಪನ್-ಕು ಬೆಳವಣಿಗೆಯಿಂದ ಉಂಟಾದುದಂತೆ. ಇವೆರಡರ ನಡುವೆ ಪ್ರತಿನಿತ್ಯ ಹತ್ತು ಅಡಿ ಅಂತರವಾಗುತ್ತ ಬಂದು ಪನ್-ಕು ಸತ್ತ ಮೇಲೆ ಅವನ ದೇಹದ ಭಾಗಗಳು ರೂಪಾಂತರಗೊಂಡವು. ಅವನ ಉಸಿರು ಗಾಳಿಯಾಯಿತು; ಅವನ ಧ್ವನಿ ಗುಡುಗಾಯಿತು; ಅವನ ಕಣ್ಣುಗಳು ಸೂರ್ಯಚಂದ್ರರಾದರು; ಉಳಿದ ಭಾಗಗಳು ಪರ್ವತಗಳು, ನದಿಗಳು, ಕಲ್ಲುಮಣ್ಣು, ಗಿಡಮರ, ಲೋಹ ಮುಂತಾದವುಗಳಾದವು; ಅವನ ದೇಹದ ಹೇನುಗಳು ಮಾನವ ಜೀವಿಗಳಾಗಿ ಮಾರ್ಪಾಡಾದವು.

	ಪ್ರಕೃತಿ ಪುರಾಣಗಳಲ್ಲಿ ಸೂರ್ಯಪುರಾಣ ಹೆಚ್ಚು ಸಂಪದ್ಯುಕ್ತವಾಗಿರುವಂತೆ ಕಾಣುತ್ತದೆ. ಸೂರ್ಯ ರಥದಲ್ಲಿ ಪ್ರಯಾಣ ಮಾಡುವಂತೆಯೂ  ಪೆಡಂಭೂತ (ಡ್ರೇಗನ್) ಅದನ್ನು ಎಳೆಯುಂವತೆಯೂ ತಿಳಿದು ಬರುವುದಿಲ್ಲದೆ ಮೂರು ಕಾಲಿನ ಡೊಂಬ ಕಾಗೆ ಕೂಡ ಸೂರ್ಯರ ಪ್ರಯಾಣಕ್ಕೆ ಸಹಕಾರಿ ಎಂಬ ಪುರಾಣವೂ ಕಾಣಸಿಗುತ್ತದೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ದಶಸೂರ್ಯರ ಕಲ್ಪನೆ. ಈಗ ಒಬ್ಬನೆ ಸೂರ್ಯ ಇರುವುದಕ್ಕೆ ಕಾರಣವನ್ನು ಹೀಗೆ ವಿವರಿಸಲಾಗಿದೆ. ಒಮ್ಮೆ ದಶಸೂರ್ಯರೂ ಏಕಕಾಲದಲ್ಲಿ ಆಕಾಶದಲ್ಲಿ ಕಾಣಿಸಿಕೊಂಡು ತಮ್ಮ ಸಂಯುಕ್ತ ಕಿರಣಗಳಿಂದ ಭೂಮಿಯನ್ನು ಸುಡಲಾರಂಭಿಸಿದರು. ಆಗ ರಾಜಕುಮಾರ ಒಂದನೆಯ ಆರ್ಚರ್ ಒಂಬತ್ತು ಮಂದಿ ಸೂರ್ಯರನ್ನು ಹೊಡೆದುರುಳಿಸಿ ಭೂಮಿಯನ್ನು ರಕ್ಷಿಸಿದನಂತೆ. ಸೂರ್ಯನನ್ನು ಗಂಡಸೆಂದು ಕಲ್ಪಿಸಲಾಗಿದೆ.

	ಚಂದ್ರಪುರಾಣಗಳು ಉಳಿದು ಬಂದಿರುವುದು ಬಹಳ ಕಡಿಮೆ. ಇಲ್ಲಿಯೂ ಒಂದು ಸ್ವಾರಸ್ಯವೆಂದರೆ ದ್ವಾದಶಚಂದ್ರರ ಕಲ್ಪನೆ. ಆದರೆ ಏಕಾದಶಚಂದ್ರರು ಕಾಣದಾದ ಬಗೆಗೆ ಏನೊಂದು ವಿಚಾರವೂ ಉಲ್ಲೇಖವಾಗಿಲ್ಲ. ಉಳಿದಿರುವ ಚಂದ್ರ ಹೆಣ್ಣಾಗಿ ಮೈದೋರಿರುವುದು ಮತ್ತಷ್ಟು ಆಕರ್ಷಕ ವಿಚಾರ. ಇನ್ನೊಂದು ಕಡೆ ಕೆಲವು ಆದಿವಾಸಿ ಸಂಸ್ಕøತಿಗಳಲ್ಲಿ ಪ್ರಾಚೀನಪುರುಷ ಚಂದ್ರದೇವತೆಯ ನಿದರ್ಶನ ಕಂಡುಬರುತ್ತದೆ.

	ಇತರ ಪ್ರಕೃತಿ ಪುರಾಣಗಳಲ್ಲಿ ಪೆಡಂಭೂತ ಸಂಪ್ರದಾಯ ಪ್ರಾಚೀನತಮವಾದುದು. ಚೀನೀ ಪೆಡಂಭೂತ ಅನೇಕ ಅಂಶಗಳಲ್ಲಿ ಪಾಶ್ಚಾತ್ಯ ಪುರಾಣ ಪರಂಪರೆಯ ಪೆಡಂಭೂತದ ಲಕ್ಷಣಗಳನ್ನು ಹೊಂದಿದೆ. ಅದು ಕಡೆಯ ಪಕ್ಷ ವಿನಾಶಕಾರಿ ಹಿಂಸಾತ್ಮಕ ಪ್ರಾಣಿ ಮತ್ತು ಸಾಂದರ್ಭಿಕವಾಗಿ ವಿಧಿಪಾಲಕವಾಗಿ ಕಾಣಿಸಿಕೊಳ್ಳುತ್ತದೆ. ಇಷ್ಟೇ ಅಲ್ಲದೆ ಇದು ದೈವಿಕ ಅಥವಾ ಅತಿಮಾನುಷ ಪ್ರಯಾಣ ಸಾಧನವಾಗಿ ಮತ್ತು ಕಟ್ಟಕಡೆಗೆ ಸಾಮ್ರಾಜ್ಯದ ಗೌರವ ಹಾಗೂ ಶಕ್ತಿ ಸಂಕೇತವಾಗಿ ಕಾಣಿಸಿಕೊಂಡಿದೆ.

	ಚೀನೀ ಪುರಾಣಗಳ ಪ್ರಕಾರ ಷಾಂಗ್ ಟಿ ಸ್ವರ್ಗಾಧಿಪತಿ ; ಅವನು ಭೌತಿಕ ಹಾಗೂ ಆಧ್ಯಾತ್ಮಿಕ ವಸ್ತುಗಳಿಗೆಲ್ಲ ಒಡೆಯ. ಅವನ ಸರ್ಕಾರವನ್ನು ಮೂರು ವಿಭಾಗಗಳು ನಡೆಸುತ್ತವೆ. ನಗರದೇವತೆಗಳ ವಿಭಾಗವೂ ಗ್ರಾಮ ಮತ್ತು ನಗರಗಳ ಜೀವಿತವನ್ನು ನಿಯಂತ್ರಿಸುತ್ತವೆ ; ಸ್ಥಳದೇವತೆಗಳ ವಿಭಾಗ ದೇಶವನ್ನು ನಿಯಂತ್ರಿಸುತ್ತವೆ. ಪಾಕಶಾಸ್ತ್ರದೇವತೆ ಗೃಹವನ್ನು ನಿಯಂತ್ರಿಸುತ್ತದೆ. ನರಕ ಅಥವಾ ಪಾತಾಳಲೋಕದಲ್ಲಿ ಧರ್ಮವಿಚಾರಣೆಗೆ ಹತ್ತು ನ್ಯಾಯಾಲಗಳಿವೆ. ಪ್ರತಿ ನ್ಯಾಯಾಲಯಕ್ಕೂ ಒಬ್ಬ ದೊರೆ ಅಧಿಕಾರಿ. ತೀವ್ರ ಅಪರಾಧಗಳನ್ನು ಮಾಡಿದವರನ್ನು ಸಿಡಿಲ ದೇವತೆ ಲೀ ಕುಂಗ್ ನಾಶ ಮಾಡುತ್ತಾನೆ. ಸ್ವರ್ಗ ದೇವತೆ ಮಾನವನ ಮರಣ ಕಾಲವನ್ನು ನಿರ್ಧರಿಸುತ್ತಾನೆ. ಆಗ ಮೃತನನ್ನು ಕರೆತರಲು ಸ್ವರ್ಗಾಧಿಕಾರಿಗಳನ್ನು ಐದನೆಯ ನ್ಯಾಯಾಲಯದ ದೊರೆ ಯೆನ್ ಹೊ ಕಳುಹಿಸುತ್ತಾನೆ. ಸತ್ತವರ ಆತ್ಮ, ವಿಧಿಗ್ರಂಥದಲ್ಲಿ ದಾಖಲೆಯಾಗಿರುವ ಮೇರೆಗೆ, ಅವನ ಕೃತ್ಯಗಳಿಗನುಸಾರವಾಗಿ ನ್ಯಾಯ ತೀರ್ಮಾನಕ್ಕೊಳಗಾಗುವುದು. 128 ಅಗ್ನಿನರಕಗಳು, 8 ಶೀತಲನರಕಗಳು, 8 ಅಂಧಕಾರಮಯವಾದ ನರಕಗಳು, 84,000 ಇತರ ನರಕಗಳಿವೆ.

	ಸಾಂಸ್ಕøತಿಕ ಸಾಧನೆಗಳ ಮೂಲಕ ಸಂಬಂಧಿಸಿದ ಪುರಾಣಗಳ ಕುರುಹುಗಳು ದೊರೆತಿವೆ. ಇವು ಸಾಂಸ್ಕøತಿಕ ವೀರರ ಕ್ರಮಾನುಕರಣೆಗೆ ಆರೋಪಿತವಾದವು. ಈ ಪೌರಾಣಿಕ ಕಥೆಗಳಿಗೆ ಚರಿತ್ರಾಧಾರವಿದೆಯೆಂದೂ ಮಾನವನ ಎಲ್ಲ ಚಟುವಟಿಕೆ ಮತ್ತು ನಿಯಮಗಳನ್ನು ಕರಾರುವಾಕ್ಕಾಗಿ ಅವರಿಗೆ ಆರೋಪಿಸಲಾಗಿದೆ. ಅವುಗಳಲ್ಲಿ ಹಲವು ಐತಿಹ್ಯದ ಚಕ್ರವರ್ತಿಗಳ ವಿಷಯಗಳಾದ ಬೇಟೆ, ಮೀನು ಹಿಡಿಯುವುದನ್ನು ಕಂಡುಹಿಡಿದುದ್ದು, ಬೇಸಾಯ-ಇತ್ಯಾದಿಗಳನ್ನು ಅವರಲ್ಲಿ ಒಬ್ಬೊಬ್ಬರಿಗೊಂದೊಂದರಂತೆ ಹೊರಿಸಲಾಗಿದೆ. ಈ ಸಂಪ್ರದಾಯದಲ್ಲಿ ಕೆಲವಾದರೂ ನೈಜ ಪೌರಾಣಿಕ ಗುಣಗಳನ್ನು ಉಳಿಸಿಕೊಂಡು ಬಂದಿವೆ.	

	ವಿಶ್ವದ ಎಲ್ಲ ಕಡೆಗಳಲ್ಲೂ ಕಂಡುಬಂದಿರುವಂತೆ ಬುಡಕಟ್ಟುಗಳ ಮೂಲವನ್ನು ಕುರಿತ ಪುರಾಣಗಳೂ ಚೀನೀಯರಲ್ಲಿವೆ. ವೀರಪುರಾಣಗಳಲೆಲ್ಲ ಒಂದನೆಯ ಆರ್ಚರ್‍ನನ್ನು ಕುರಿತ ಪುರಾಣ ಅತ್ಯಂತ ವಿಶದವಾಗಿದೆ. ಒಂಬತ್ತು ಮಂದಿ ಸೂರ್ಯರನ್ನು ಹೊಡೆದುರುಳಿಸಿದ್ದ ಸಾಹಸದ ಜೊತೆಗೆ ಅವನು ಅನೇಕ ವೀರ ಕಾರ್ಯಗಳನ್ನು ಎಸಗಿದ ಗೌರವಕ್ಕೆ ಪಾತ್ರನಾಗಿದ್ದಾನೆ. ಹೀಗಿದ್ದರೂ ಅವನು ಅನೇಕ ಕಡೆ ನಾಯಕನಂತೆ ಕಾಣಿಸಿಕೊಳ್ಳದೆ ಖಳನಾಯಕನಂತೆ ಕಂಡುಬರುತ್ತಾನೆ. 

	ಜಲಪ್ರಳಯದ ಪುರಾಣಗಳು ಚೀನಿಯರಲ್ಲಿ ಅಪಾರವಾಗಿ ಸಿಕ್ಕಿವೆ. ಜಲಪ್ರಳಯ ಸಾಮಾನ್ಯವಾಗಿ ಪಾಶ್ಚಾತ್ಯರಲ್ಲಿ ಚಾಲ್ತಿಯಲ್ಲಿರುವಂತೆ ಮಾನವ ಪಾಪದ ಪ್ರತೀಕಾರವಾಗಿ ಪರಿಗಣಿತವಾಗದೆ ಅಥವಾ ಮಾನವಕುಲದ ನಾಶಕ್ಕೆ ಕಾರಣವಾಗಿರದೆ, ಮನುಷ್ಯ ತನ್ನ ಮುಖ್ಯ ಆರ್ಥಿಕ ಚಟುವಟಿಕೆಯಾದ ವ್ಯವಸಾಯವನ್ನು ನಿರಾಕರಿಸಿದ ಆದಿ ಸ್ಥಿತಿಯದಾಗಿದೆ. ಇಷ್ಟೇ ಅಲ್ಲದೆ ಜಲಪ್ರಳಯ ತಾನಾಗಿಯೇ ಹಿಮ್ಮೆಟ್ಟುವುದಿಲ್ಲ. ಬದಲಾಗಿ ವಿಮೋಚನಾ ವೀರನ ಪ್ರಯತ್ನದಿಂದ ಜಯಿಸಲ್ಪಡುತ್ತದೆ. ಹೀಗಾಗಿ ಈ ಜಲಪ್ರಳಯ ಪುರಾಣ ಚೀನಿಸಮಾಜದ ಸೃಷ್ಟಿಗೆ ಸಂಬಂಧಿಸಿದ ಪುರಾಣವಾಗಿ ಪರಿಗಣಿತವಾಗಿದೆ. ಧಾರ್ಮಿಕ ಗ್ರಂಥ ಸಂಪ್ರದಾಯ ಈ ಬಗೆಯ ಅನೇಕ ಪ್ರಳಯ ಕಥೆಗಳನ್ನು ಹೊಂದಿದೆ.

	ವಿಶೇಷ ಗಮನವನ್ನು ಹರಿಸುವಷ್ಟು ಜನಪದಕಥೆಗಳ ಶ್ರೀಮಂತ ಕಣಜ, ಚೀನ, ಇತರ ಜನಾಂಗಗಳು ಕೂಡಿಸಿರುವ ಜನಪದ ಕಥೆಗಳ ಸಂಗ್ರಹಕ್ಕಿಂತ ಚೀನದಲ್ಲಿ ಐತಿಹಾಸಿಕಕಾಲದಲ್ಲಿ ಸಂಗ್ರಹವಾದ ಕಥೆಗಳಲ್ಲಿ ವೈವಿಧ್ಯವಿರುವುದರಿಂದ ಅದನ್ನು ಗಮನಿಸುವುದು ಅಗತ್ಯ. ಚೀನದಲ್ಲಿ ಕಥೆಗಳನ್ನು ಜನಪದ ದೃಷ್ಟಿಯಲ್ಲೇ ಕಾಣುತ್ತಾರೆ; ಅವು ಜನಪ್ರಿಯವಾದವು. ಪಂಡಿತರ ದೃಷ್ಟಿಯನ್ನು ಮುಟ್ಟಲು ಯೋಗ್ಯವಲ್ಲ ಅವು ಎಂಬ ಭಾವನೆ ಇದ್ದಂತೆ ಕಾಣುತ್ತದೆ. ಈ ಪರಿಣಾಮವಾಗಿ ಇತ್ತೀಚಿನವರೆಗೂ ಜನಪ್ರಿಯ ಕಥೆಗಳು ಹಾಗೂ ಇತರ ಕಥೆಗಳ ನಡುವೆ ವ್ಯತ್ಯಾಸವಿಲ್ಲದಿರುವುದು ಕಂಡುಬರುತ್ತದೆ. ಎಲ್ಲ ಕಥೆಗಳಲ್ಲೂ ಜನಪದ ಕಥನಕ್ಕನುಗುಣವಾದ ವಿಷಯಗಳು ತುಂಬಿರುತ್ತವೆ. ಚೀನೀ ಜನಪದ ಕಥೆಗಳು ಯೂರೋಪಿನಲ್ಲಿ ಪ್ರಕಟವಾಗುವುದಕ್ಕೆ ನೂರಾರು ವರ್ಷಗಳ ಹಿಂದೆಯೇ ಚೀನದಲ್ಲಿ ಮೂಲಕಥೆಗಳನ್ನು ಸ್ವಲ್ಪವೂ ವ್ಯತ್ಯಾಸವಿದಲ್ಲದಂತೆ ಪ್ರಕಟಿಸಲಾಗಿತ್ತು. ಯೂರೋಪಿನಲ್ಲಿ ಪ್ರಚಲಿತವಾಗಿರುವ ಸಿಂಡ್ರೆಲ ಮಲಮಗಳೊಬ್ಬಳು ರಾಜಕುಮಾರನನ್ನು ಮದುವೆಯಾದ ಕಥೆ, ಅದರ ಜಾನಪದ ಅಂಶಗಳೊಂದಿಗೆ 700 ವರ್ಷಗಳ ಹಿಂದೆಯೇ ತಾಂಗ್ ರಾಜಸಂತತಿಯ ಕಾಲದಲ್ಲಿ ಟು ಅನ್ ಚುಂಗ್ ಷಿ ಎಂಬಾತನ ಯೂ ಯಾಂಗ್ ಟ್ಸಾ ಟ್ಸು ಗ್ರಂಥದಲ್ಲಿ ಪ್ರಕಟವಾಗಿತ್ತು. ಕೆಲವು ಸಂದರ್ಭಗಳಲ್ಲಿ ಚೀನದ ಐತಿಹಾಸಿಕ ಘಟನೆಗಳು, ಜನಪ್ರಿಯ ಕಥೆ, ಕಾದಂಬರಿ ಮತ್ತು ನಾಟಕಗಳ ರೂಪಕ್ಕೆ ಪರಿವರ್ತಿತವಾಗಿರುವುದೂ ಉಂಟು.

	ಚೀನೀಯರಲ್ಲಿ ಎರಚಿದ ಮಣ್ಣಿನಿಂದ ಮತ್ತು ಚುಕ್ಕೆಗಳ ಗುರುತುಗಳಿಂದ ಶಾಸ್ತ್ರ ನುಡಿಯುವ ಪದ್ಧತಿ ಇದೆ. ಭವಿಷ್ಯ ಹೇಳುವುದರಲ್ಲಿ ಅವರು ಪ್ರವೀಣರು. ವರ್ಷ, ದಿನ ಮತ್ತು ಗಳಿಗೆಯ ಆಧಾರದ ಮೇಲೆ ಜನ್ಮಕುಂಡಲಿಯನ್ನು ಹಾಕುತ್ತಾರೆ. ಜೀವಿತಕ್ಕೆ ಸಂಬಂಧಪಟ್ಟಂತೆ ದೋಷಗಳಿದ್ದರೆ ಪರಿಹಾರ ನೀಡುತ್ತಾರೆ. ಜನ್ಮೋತ್ಸವ ವಿವಾಹ ಮತ್ತು ಅಂತ್ಯಕ್ರಿಯೆಗಳನ್ನು ಪಂಚಾಂಗ ನೋಡಿ ನೆರವೇರಿಸುತ್ತಾರೆ. ಕೆಲವು ಆಹಾರಗಳ ಸೇವನೆ ಮತ್ತು ಸಂಭೋಗ ಇವುಗಳಿಗೂ ಶುಭಕಾಲಗಳು ಕ್ಲುಪ್ತವಾಗಿವೆ.

	ಚೀನೀಯರ ಪಂಚಾಂಗದಲ್ಲಿಯೂ ಅವನ ಜಾನಪದ ಲಕ್ಷಣವನ್ನು ನೋಡಬಹುದಾಗಿದೆ. ಚೀನೀವರ್ಷ ಚಾಂದ್ರಮಾನವರ್ಷ ; ಅವರ ಪಂಚಾಂಗ ಸೂರ್ಯಪಂಚಾಂಗ. 12 ಚಾಂದ್ರಮಾನಮಾಗಳು; ಪ್ರತಿಮಾಸಕ್ಕೂ 28 ದಿನಗಳು. ಪ್ರತಿ ತಿಂಗಳಿಗೂ ಪ್ರಾಣಿಗಳ ಹೆಸರುಗಳನ್ನು ಇಟ್ಟಿದ್ದಾರೆ. ವರ್ಷದ ಮೊದಲ ಹುಣ್ಣಿಮೆಯೆ ಯುಗಾದಿ. ಇದು ಸರಿಸುಮಾರು ಚೈತ್ರಮಾಸದಲ್ಲಿ ಬರುತ್ತದೆ. ಅಂದು ಗೃಹದೇವತಾರಾಧನೆ ನಡೆಸುತ್ತಾರೆ. ಯುಗಾದಿಯ ಮೂರನೆಯ ದಿನ, ಶ್ರಿದೇವತೆಯನ್ನು ಅರ್ಚಿಸುತ್ತಾರೆ. ವರ್ಷದ ಮೊದಲ ತಿಂಗಳು ಅತ್ಯಂತ ಸಡಗರದ್ದು. ಆದರೆ ಮೊದಲ ದಿನ ಹಕ್ಕಿಗಳ ದಿನ, ಎರಡನೆ ದಿನ ನಾಯಿಗಳ ದಿನ, ಮೂರನೆಯದು ಹಂದಿಯದು. ಹೀಗೆ ಪ್ರತಿಯೊಂದು ದಿನಕ್ಕೂ ಒಂದೊಂದು ಪ್ರಾಣಿಯ ಪ್ರಾಮುಖ್ಯ ಇದೆ. ಬಾತುಗಳ ದಿನವಾದ ನಾಲ್ಕನೆಯ ದಿನ ಸಾರ್ವತ್ರಿಕ ಸ್ನಾನ ಗೃಹಗಳನ್ನು ತೆರೆಯುತ್ತಾರೆ. ಅಶ್ವದ ದಿನವಾದ ಏಳನೆಯ ದಿನ ಮನೆಯಲ್ಲೇ ಇದ್ದು ವರ್ಷವಿಡೀ ರೋಗಸಂಭವಿಸದಂತೆ ಕೆಂಪು ಅವರೆ ಬೀಜಗಳನ್ನು ತಿನ್ನುತ್ತಾರೆ. ಪುರುಷ 7 ಬೀಜಗಳನ್ನು ಸ್ತೀ 14 ಬೀಜಗಳನ್ನು ತಿನ್ನಬೇಕು. ವಸಂತ ಕಾಲದಲ್ಲಿ (ಲೀ ಚುನ್) ದನ ಅಥವಾ ಕೋಣವನ್ನು ದೇವತೆಗಳಿಗೆ ಬಲಿಕೊಡುತ್ತಾರೆ. ವರ್ಷದ ಮೊದಲ ತಿಂಗಳ 15ದಿನ ದೀಪೋತ್ಸವ ಜರುಗುತ್ತದೆ. 19ನೆಯ ದಿನ ಇಲಿಗಳ ಮುದುವೆ ನಡೆಯುವುದರಿಂದ ಎಲ್ಲರೂ ಬೇಗ ಮಲಗಿಕೊಳ್ಳುತ್ತಾರೆ. ಎರಡನೆಯ ಹುಣ್ಣಿಮೆಯಲ್ಲಿ ಸೂರ್ಯನಿಗೂ ಭೂದೇವಿಗೂ ಪೂಜೆ ಸಲ್ಲುತ್ತವೆ. ಮೂರನೆಯ ತಿಂಗಳು ಪಿತೃಗಳ ಸಮಾಧಿ ಪೂಜೆ ನಡೆಯುತ್ತದೆ. ನಾಲ್ಕನೆಯ ತಿಂಗಳು ಗೌತಮನ ಹುಟ್ಟು ಹಬ್ಬ; ಆರನೆಯ ತಿಂಗಳು ಸರ್ಪರಾಜ ಲುಂಗ್‍ವಾಂಗನಿಗೆ ಪೂಜೆ; ಏಳನೆಯ ತಿಂಗಳು ಹಸಿದ ಪ್ರೇತಗಳ ತಿಂಗಳು. ಆ ದಿನ ಸಣ್ಣ ಕಾಗದದ ದೋಣಿಗಳಲ್ಲಿ ಮೇಣದ ಬತ್ತಿಗಳನ್ನು ಹೊತ್ತಿಸಿ ನೀರಿನಲ್ಲಿ ತೇಲಿಬಿಡುತ್ತಾರೆ. ಎಂಟನೆಯ ತಿಂಗಳು ಸುಗ್ಗಿ; ಈ ತಿಂಗಳ 25ನೆಯ ದಿನ ನಗರದೇವತೆಯಾದ ಚೆಂಗ್ ಹುವಾಂಗನ ಹಬ್ಬ. ಒಂಬತ್ತನೆ ತಿಂಗಳು ಮೃತರ ಸ್ಮರಣಾರ್ಥಕವಾದ ತಿಂಗಳು; ಹನ್ನೊಂದನೆಯ ತಿಂಗಳು ಮದುವೆಗಳ ಕಾಲ; ಹನ್ನೆರಡನೆಯ ತಿಂಗಳು ಮುಂಬರುವ ಹೊಸವರ್ಷಕ್ಕೆ ಸಿದ್ಧತೆಗಳಾಗುತ್ತವೆ. ಈ ತಿಂಗಳ 23ನೆಯ ದಿನ ಪಾಕಶಾಲೆಯ ದೇವತೆಯ ಚಿತ್ರವಿರುವ ಕಾಗದವನ್ನು ಸುಟ್ಟು ಅವನನ್ನು ಸ್ವರ್ಗಕ್ಕೆ ಕಳುಹಿಸುತ್ತಾರೆ. ಅವನು ಕುಟುಂಬದಲ್ಲಿ ಆ ವರ್ಷ ನಡೆದ ವಿಷಯಗಳನ್ನು ಮತ್ತು ಕುಟುಂಬದ ಜನರ ವರ್ತನೆಯನ್ನು ಸ್ವರ್ಗದಲ್ಲಿ ವರದಿ ಮಾಡುತ್ತಾನೆ.

	ಜೀವಿತಕ್ಕೆ ಸಂಬಂಧಪಟ್ಟಂತೆ ಚೀನದಲ್ಲಿ ಹಲವಾರು ಹಬ್ಬಗಳಿವೆ. ಹುಟ್ಟಿನಿಂದ ಸಾವಿನವರೆಗೆ ಅನುಸರಿಸುವ ಸಂಸ್ಕಾರಗಳು ಜಾನಪದ ಹಾಗೂ ಸಾಮಾಜಿಕ ವೈಶಿಷ್ಟ್ಯವುಳ್ಳವು. ಅವುಗಳಲ್ಲಿ ಕೆಲವು ಮೂಢನಂಬಿಕೆಗಳಿಂದ ಕೂಡಿವೆ; ಕೆಲವು ಜೀವಿತ ಸಮಸ್ಯೆಗಳನ್ನು ಎದುರಿಸಲು ಧೈರ್ಯತಂದುಕೊಡುವ ಸಾಧನೆಗಳಾಗಿವೆ. ನಗರದಲ್ಲಿ ಗಾದೆ ಮತ್ತು ನಲ್ನುಡಿಗಳನ್ನು ಚೀಟಿಗಳಲ್ಲಿ ಬರೆದು ಗೋಡೆಗಳ ಮೇಲೆ ಅಂಟಿಸುವ ಪದ್ಧತಿಯೂ ಇತ್ತು.

	ಪಿತೃಪ್ರಧಾನ ಕುಟುಂಬಗಳೇ ಹೆಚ್ಚಾಗಿರುವ ಚೀನದಲ್ಲಿ ಕುಟುಂಬದ ಯಜಮಾನ ಕುಟುಂಬದ ಪುರೋಹಿತ ಹಾಗೂ ಮುಖಂಡ. ಉಳಿದವರು ಅವನಿಗೆ ಅಧೀನ. ಪರಲೋಕವೈದಿದ ಪೂರ್ವಜರು ಜೀವಂತ ವಂಶಜರಿಗೆ ನೆರವು ನೀಡುತ್ತಾರೆ. ಕುವಾನ್‍ಯಿನ್ ದೇವತೆಯೇ ಅವರ ಮಹಾಮಾತೆ. ಮಗು ಹುಟ್ಟಿದಾಗ ಅವಳ ದೇಗುಲದಿಂದ ಹಳೆಯ ಪಾದರಕ್ಷೆಯನ್ನು ಕದ್ದು ಅದಕ್ಕೆ ಪ್ರತಿಯಾಗಿ ಹೊಸದನ್ನು ಇಟ್ಟುಬರುವ ಪದ್ಧತಿ ಇದೆ. ಇದು ಮಕ್ಕಳಿಗೆ ರಕ್ಷಣೆ. ಮಕ್ಕಳಾಗದವರು ಸಂತಾನಕ್ಕಾಗಿ ಅವಳನ್ನು ಪ್ರಾರ್ಥಿಸುತ್ತಾರೆ. ಪವಿತ್ರ ಪರ್ವತದ ಕುಮಾರಿಯರನ್ನು ಪೂಜಿಸುತ್ತಾರೆ. ಪರ್ವತರಾಣಿಯ ಹೆಸು ಟೈಷನ್. ಆಕೆಯ ಸಖಿಯರು ಸಂವೃದ್ಧಿಯ ದೇವಿಯರು. ಮಕ್ಕಳನ್ನು ದಯಪಾಲಿಸುವವರು ಇತ್ಯಾದಿ. ಸಾಹಿತ್ಯಕ್ಕೂ ದೇವತೆಗಳಿದ್ದಾರೆ. ಪುಣ್ಯಸ್ಥಳಗಳಿಗೆ ಯಾತ್ರೆ ಹೋಗುವ ಪದ್ಧತಿ ಇದೆ. ಸಂಭೋಗಕ್ಕೆ ಶಾಸ್ತ್ರೀಯ ಆಚರಣೆಗಳಿವೆ. ಬರೀ ಹೆಣ್ಣು ಮಕ್ಕಳಾಗುವ ಮನೆಗಳಲ್ಲಿ ಕೊನೆಯ ಹೆಣ್ಣಿಗೆ ಹುಡುಗನ ಹೆಸರನ್ನಿಟ್ಟು ಹೆಣ್ಣುಮಕ್ಕಳಾಗದಂತೆ ತಡೆಯಬಹುದೆಂಬ ನಂಬಿಕೆ ಇದೆ. ಗರ್ಭಿಣಿ ಚಿನ್ನ ಕತ್ತಿಯನ್ನು ಕೊರಳಿಗೆ ಕಟ್ಟಿಕೊಂಡು ಭೂತಚೇಷ್ಟೆಗಳಿಂದ ಪಾರಾಗಬಹುದು. ಹುಟ್ಟುವ ಮಗು ಹೆಣ್ಣೊ ಗಂಡೋ ಎಂಬುದಕ್ಕೆ ಭವಿಷ್ಯವನ್ನು ನುಡಿಯುತ್ತಾರೆ. ಹೆರಿಗೆ ಸುಗಮವಾಗಲು ಮಂತ್ರಿಸಿದ ಕಾಗದವನ್ನು ಸುಡುತ್ತಾರೆ; ಅಥವಾ ಗರ್ಭಿಣಿಯ ಕೊರಳಿಗೆ ಕಟ್ಟುತ್ತಾರೆ. ಇಲ್ಲವೆ ಚೂರು ಮಾಡಿ ಚಹದೊಂದಿಗೆ ಬೆರೆಸಿ ಕುಡಿಸುತ್ತಾರೆ. ಗರ್ಭಿಣಿಯರು ಸಣ್ಣ ಕನ್ನಡಿಗಳನ್ನು ಹೊತ್ತಿದ್ದರೆ ಭೂತಗಳು ಕನ್ನಡಿಯಲ್ಲಿ ತಮ್ಮ ಆಕೃತಿಯನ್ನು ನೋಡಿ ಹೆದರಿ ಗರ್ಭಿಣಿಯರ ಹತ್ತಿರಕ್ಕೆ ಬರೆದೆ ಓಡುತ್ತವೆ ಎಂಬ ನಂಬಿಕೆ ಚೀನಿಯರದು. ಸೂತಿಕಾ ಗೃಹದಲ್ಲಿ ಕೆಂಪು ಮೇಣದ ಬತ್ತಿಯನ್ನು ಉರಿಸಿದರೆ ಭೂತಗಳು ಮಗುವಿನ ಒಡಲನ್ನು ಪ್ರವೇಶಿಸುವುದಿಲ್ಲವೆಂಬ ನಂಬಿಕೆಯೂ ಇದೆ.

	ವಿವಾಹಪದ್ಧತಿಯೂ ತನ್ನ ವೈಶಿಷ್ಟ್ಯವನ್ನು ಕಾಪಾಡಿಕೊಂಡಿದೆ. ದಳ್ಳಾಳಿಯ ಮೂಲಕ ಮದುವೆಯ ಬಗ್ಗೆ ವ್ಯವಹಾರ ನಡೆದಮೇಲೆ ಎಂಟು ಅಕ್ಷರಗಳಿಂದ ಕೂಡಿದ ಕಾಗದದ ಚೂರುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಆ ತರುವಾಯ ವಿವಾಹ ಸಾಧ್ಯವೆ ಇಲ್ಲವೆ ಎಂಬುದನ್ನು ಜ್ಯೋತಿಷಿ ನಿಶ್ಚಯಿಸುತ್ತಾನೆ. ವಿವಾಹಗಳು ಶುಕ್ಲಪಕ್ಷದಲ್ಲಿ ನಡೆಯುತ್ತವೆಯೇ ಹೊರತು ಕೃಷ್ಣಪಕ್ಷದಲ್ಲಲ್ಲ. ವಿವಾಹಕ್ಕೆ ಮುಂಚೆ ವಧು ಮೃತಪಟ್ಟರೆ ಅವಳ ಪಾದರಕ್ಷೆಗಳನ್ನು ವರನಿಗೆ ಕೊಡುತ್ತಾರೆ. ವಿವಾಹ ನಡೆದ ಮೆಲೆ ವಧುವಿಗೆ ತಾಯಿತಗಳನ್ನು ಕಟ್ಟುತ್ತಾರೆ. ಅದರಿಂದ ಆಕೆ ಅತ್ತೆಯ ಕಾಟದಿಂದ ಪಾರಾಗುತ್ತಾಳೆ.

	ಸತ್ತವನನ್ನು ಸ್ವರ್ಗಕ್ಕೇರಿಸುವ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಅವಸಾನ ಸನ್ನಿಯಿತವಾದವನನ್ನು ಮನೆಯಿಂದ ಹೊರಗೆ ತಂದು ಮಲಗಿಸುವುದರಿಂದ ಪ್ರೇತ ಗೃಹಪ್ರವೇಶ ಮಾಡದಂತೆ ತಡೆಯುವುದು ಸಾಧ್ಯವೆಂಬ ನಂಬಿಕೆಯಿದೆ. ಅವನ ತಲೆದಿಂಬನ್ನು ಸುಡುತ್ತಾರೆ. ಮೆರವಣಿಗೆ ಕುರ್ಚಿಯಲ್ಲಿ ಶವವನ್ನು ಸ್ಥಳದೇವತೆಯ ಗುಡಿಗೆ ತೆಗೆದುಕೊಂಡು ಹೋಗುತ್ತಾರೆ. ಅವರ ಪರಲೋಕದ ಉಪಯೋಗಕ್ಕಾಗಿ ಆಹಾರ ಹಣ ಮೊದಲಾದವು ಸಾಂಕೇತಿಕವಾಗಿ ವಸ್ತುಗಳ ರೂಪದಲ್ಲಿ ಅವನ ಹಿಂದೆ ಹೋಗುತ್ತವೆ. ಟುಟಿ ಎಂಬ ಗ್ರಾಮದೇವತೆಯ ಗುಡಿಯಲ್ಲಿ ಮೂರು ದನಗಳ ಸಂಸ್ಕಾರಗಳು ನಡೆದ ತರುವಾಯ ಶವವನ್ನು ಜಿಲ್ಲಾದೇವತೆಯ ಗುಡಿಗೆ ಕೊಂಡೊಯ್ಯುತ್ತಾರೆ. ವಂಶೀಕರ ಸಮಾಧಿಗಳಿರುವ ಸ್ಥಳದಲ್ಲಿ ಅವನನ್ನು ಹೂಳುತ್ತಾರೆ. ಜ್ಯೋತಿಷ್ಯನ ಲೆಕ್ಕಚಾರದ ಪ್ರಕಾರ ಒಂದು ಶುಭದಿನದಲ್ಲಿ ಮೃತನ ಹುಟ್ಟು ಸಾವು ಹಾಗೂ ಗುಣಾತಿಶಯಗಳನ್ನು ವರ್ಣಿಸುವ ಸಮಾಧಿಶಿಲೆಯನ್ನು ನೆಡುತ್ತಾರೆ. ಸತ್ತವನಿಗೆ ಮತ್ತು ಇತರರಿಗೆ ಸಂತಾಪವನ್ನು ವ್ಯಕ್ತಪಡಿಸಲು ಹಣಕ್ಕಾಗಿ ನೇಮಕವಾಗಿರುವ ಜನ ಗಟ್ಟಿಯಾಗಿ ರೋಧಿಸುತ್ತಾರೆ. ಮೃತನ ಸೂಳೆಯರ ಹಾಗೂ ಸೇವಕರ ಚಿತ್ರಗಳನ್ನು ಮತ್ತು ಅವನ ಪರಲೋಕದ ಖರ್ಚಿಗೆ ಬೇಕಾದ ಹಣ, ಆಹಾರ ಮೊದಲಾದ ಭೋಗವಸ್ತುಗಳ ಚಿತ್ರಗಳನ್ನು ಬರೆದ ಕಾಗದಗಳನ್ನು ಸಮಾಧಿ ಬಳಿ ಸುಡುತ್ತಾರೆ. ಮೃತನ ಆತ್ಮಶಾಂತಿಗೆ ಒಂದು ವರ್ಷಕಾಲ ಕ್ಲುಪ್ತಕಾಲಗಳಲ್ಲಿ ಸಂಸ್ಕಾರಗಳು ನಡೆಯುತ್ತವೆ.

	ಸಾವಿರಾರು ವರ್ಷಗಳ ಹಿಂದೆ ಇದ್ದಂತೆ ಈಗಲೂ ಜೀವಂತವಾಗಿರುವ ಚೀನೀ ಜಾನಪದ ಚೀನೀಯರ ಸಾರ್ವತ್ರಿಕ ನಂಬಿಕೆಗಳನ್ನು ಹಾಗೂ ಪದ್ಧತಿಗಳನ್ನು ವ್ಯಕ್ತಪಡಿಸುತ್ತದೆ. ಚೀನೀಯರು ಹೊಸದೇವತೆಗಳನ್ನು ಸೃಷ್ಟಿಮಾಡುವುದರಲ್ಲಿ ಹಾಗೂ ವಿದೇಶೀ ದೇವತೆಗಳನ್ನು ಅಂಗೀಕರಿಸುವುದರಲ್ಲಿ ಪ್ರವೀಣರು, ಉದಾರಿಗಳು. ಈ ಪರಿಸ್ಥಿತಿಯಲ್ಲಿ ಹೊಸ ಐತಿಹ್ಯಗಳಿಗೂ ಅವರು ಅವಕಾಶ ನೀಡಿದ್ದಾರೆ. ಗ್ರೀಕರ ಇಲ್ಲವೆ ಭಾರತೀಯರ ಪುರಾಣಕಥೆ ಮತ್ತು ಆಖ್ಯಾನಕೆಗಳು ಮಿತವಾಗಿರುವುದರಿಂದ ಅವನ್ನು ಅಧ್ಯಯನ ಮಾಡಿ ರಕ್ಷಿಸಲು ಪ್ರಯತ್ನಗಳು ನಡೆದಿವೆ. ಆದರೆ ಚೀನೀಪುರಾಣ ಮತ್ತು ಐತಿಹ್ಯಗಳ ವ್ಯಾಪ್ತಿ ಗ್ರಹಿಸಲಾರದಷ್ಟು ಅಪಾರವಾದ್ದರಿಂದ ಅಧ್ಯಯನಕ್ಕೆ, ಸಂಗ್ರಹಕ್ಕೆ ತೊಡಕುಗಳಿವೆ. ಅವರಲ್ಲಿ ಸ್ವರ್ಗ ಪಾತಾಳಗಳಿಗೆ ಸಂಬಂಧಪಟ್ಟ ಶ್ರೀಮಂತವರ್ಗದ ದೇವತೆಗಳು ಲೆಕ್ಕವಿಲ್ಲದಷ್ಟು ಇದ್ದಾರೆ. ನಭೋಮಂಡಲದ ಲಕ್ಷಾಂತರ ಮಂದಿ ದೇವತೆಗಳು ನಕ್ಷತ್ರಗಳನ್ನು ಪ್ರತಿನಿಧಿಸುತ್ತಾರೆ. ಆತ್ಮನ ಬಗ್ಗೆ ಅಸಂಖ್ಯಾತ ಭೂತ ಪ್ರೇತಗಳಿವೆ. ತಮ್ಮ ರೂಪವನ್ನು ಬದಲಾಯಿಸುವ ಪ್ರಾಣಿಗಳಿವೆ, ಸಸ್ಯಗಳಿವೆ, ಶಿಲೆಗಳಿವೆ. ಚೀನೀ ಪರಂಪರೆ, ನಂಬಿಕೆ, ರೂಢಿಗಳು ಸಮುದಾಯದ ಮತ್ತು ವ್ಯಕ್ತಿಯ ಯೋಗಕ್ಷೇಮಕ್ಕಾಗಿ ರಕ್ಷಿತವಾಗಿವೆ. ಚೀನೀಯರ ಭಯ-ಭೀತಿಗಳನ್ನು ಹಾಗೂ ಆಸೆ-ಆಕಾಂಕ್ಷೆಗಳನ್ನು ಅವು ಅಭಿವ್ಯಕ್ತಿಪಡಿಸುತ್ತವೆ. ಹೀಗಾಗಿ ವೈಚಿತ್ರ್ಯಮಯ ಸಾಮಾಜಿಕ ಪದ್ಧತಿಗಳನ್ನು ರೂಪಿಸಿರುವ ಚೀನೀ ಜಾನಪದದ ವೈಶಿಷ್ಟ್ಯವನ್ನು ಗ್ರಹಿಸುವುದು ಅಷ್ಟೇನು ಸುಲಭಸಾಧ್ಯವಲ್ಲ.		(ಪಿ.ಕೆ.ಆರ್.ಎ.)

	ಚೀನೀ-ಟಿಬೆಟನ್  ಭಾಷಾ ಪರಿವಾರ : ಚೀನ, ಟಿಬೆಟ್, ಬರ್ಮ, ತೈಲೆಂಡ್, ಸಯಾಮ್, ಇಂಡೋ-ಚೀನ ಮುಂತಾದ ದೇಶಗಳ ಕೆಲವು ಭಾಷೆಗಳು ಸೇರಿ ಆದ ಭಾಷಾಕುಟುಂಬ. ಇದರಲ್ಲಿ ಸುಮಾರು ನೂರ ಹದಿನೈದಕ್ಕೂ ಹೆಚ್ಚು ಭಾಷೆಗಳು ಸೇರುತ್ತವೆ. ಈ ಪರಿವಾರವನ್ನು ಕೆಲವು ವಿದ್ವಾಂಸರು ಚೀನೀ ಭಾಷಾ ಪರಿವಾರವೆಂತಲೂ ಚೀನೀ-ಟಿಬೆಟನ್ ಭಾಷಾಪರಿವಾರವೆಂತಲೂ ಏಕಾಕ್ಷರ ಪರಿವಾರವೆಂತಲೂ ಸಿನೋ-ಟಿಬೆಟನ್ ಭಾಷಾಪರಿವಾರವೆಂತಲೂ ಇಂಡೊ-ಚೀನೀ ಭಾಷಾ ಪರಿವಾರವೆಂತಲೂ ಕರೆದಿದ್ದಾರೆ. ಸದ್ಯಕ್ಕೆ ಇವನ್ನು ಸಿನೋ-ಟಿಬೆಟನ್ ಭಾಷಾ ಪರಿವಾರವೆಂದೂ ಕರೆಯುವುದು ವಾಡಿಕೆ. ಈ ಪರಿವಾರ ಜಗತ್ತಿನ ಹಿರಿಯ ಭಾಷಾಪರಿವಾರಗಳಲ್ಲಿ ಒಂದು.; ಈ ಪರಿವಾರದ ಭಾಷೆಗಳನ್ನು ಆಡುವ ಜನರ ಸಂಖ್ಯೆಯನ್ನು ಆಧರಿಸಿ, ಹೇಳುವುದಾದರೆ, ಇಂಡೋ ಯೂರೋಪಿಯನ್ ಭಾಷಾ ಪರಿವಾರವನ್ನು ಬಿಟ್ಟರೆ, ವಿಶ್ವದಲ್ಲಿ ಇದೇ ಎರಡನೆಯ ದೊಡ್ಡ ಭಾಷಾ ಪರಿವಾರವೆನಿಸಿಕೊಳ್ಳುತ್ತದೆ. ಇಡೀ ಏಷ್ಯಖಂಡದಲ್ಲಿಯೇ ಹೆಚ್ಚು ಜನ ಆಡುತ್ತಿರುವ ಭಾಷೆಗಳು ಈ ಪರಿವಾರಕ್ಕೆ ಸೇರಿದವಾಗಿವೆ. ಇದರಲ್ಲಿ ಚೀನೀ ಭಾಷೆಯೇ ಬಹು ಮುಖ್ಯವಾದುದು. ಇದನ್ನು ಇಂಡೋಚೀನ, ಚೀನ ಮುಂತಾದ ದೇಶಗಳಲ್ಲಿನ ಹೆಚ್ಚು ಜನ ಬಳಸುತ್ತಿದ್ದಾರೆ.

	ಚೀನೀ-ಟಿಬೆಟನ್ ಪರಿವಾರಕ್ಕೆ ಸೇರಿದ ಭಾಷೆಗಳನ್ನು ಮುಖ್ಯವಾಗಿ ಎರಡು ವರ್ಗಗಳಲ್ಲಿ ವಿಂಗಡಿಸಬಹುದು. ಒಂದು ಟಿಬೆಟೊ-ಬರ್ಮೀ ಭಾಷಾವರ್ಗ; ಮತ್ತೊಂದು ಟಿಬೆಟೊ-ಚೀನೀ ವರ್ಗ. ಕೆಲವು ವಿದ್ವಾಂಸರು ಈ ಭಾಷಾ ಪರಿವಾರವನ್ನು ಸಿನೋಟಿಬೆಟನ್ ಪರಿವಾರವೆಂದು ಕರೆದು ಟಿಬೆಟೊ-ಬರ್ಮೀ, ಟಿಬೆಟೊ-ಚೀನೀ ಮತ್ತು ಸ್ಯಾಮಿ-ಥೈ ಎಂದು ಮೂರು ವರ್ಗಗಳಾಗಿ ವಿಂಗಡಿಸಿದ್ದಾರೆ. ಮತ್ತೆ ಕೆಲವರು ಈ ಪರಿವಾರವನ್ನು ಚೀನೀ ಭಾಷಾಪರಿವಾರವೆಂದು ಕರೆದು ಇದನ್ನು ಚೀನೀ, ಸ್ಯಾಮಿ, ಟಿಬೆಟಿನ್ ಮತ್ತು ಬರ್ಮೀ ಭಾಷಾವರ್ಗಗಳೆಂದು ನಾಲ್ಕು ಬಗೆಯಲ್ಲಿ ವಿಂಗಡಿಸಿದ್ದಾರೆ. ಮೇಲಿನ ವರ್ಗೀಕರಣ ಏನೇ ಆಗಿದ್ದರೂ ಈ ಭಾಷೆಗಳಲ್ಲಿ ಕಂಡುಬರುವ ಕೆಲವು ಲಕ್ಷಣಗಳನ್ನು ಗಮನಿಸಿ ಟಿಬೆಟೊ-ಚೀನೀ ಮತ್ತು ಟಿಬೆಟೋ-ಬರ್ಮೀ ಭಾಷಾವರ್ಗಗಳೆಂದು ಎರಡಾಗಿ ವರ್ಗೀಕರಿಸುವುದು ಹೆಚ್ಚು ಸೂಕ್ತವಾಗಿ ತೋರುತ್ತದೆ.

	ಟಿಬೆಟೊ-ಚೀನೀ ಭಾಷಾವರ್ಗ: ಈ ವರ್ಗದಲ್ಲಿ ಚೀನಿ-ಸ್ಯಾಮಿ, ಮತ್ತು ಚೀನೀ-ಥಾಯ್ ಎಂಬ ಎರಡು ಭಾಷಾಸಮುದಾಯಗಳು ಇವೆ. ಈ ವರ್ಗಕ್ಕೆ ಸೇರಿದ ಭಾಷೆಗಳಲ್ಲಿ ಸ್ಯಾಮಿ, ಶಾನ್, ಕರೆನ್, ಚೀನಿ, ಲಾವೋ, ಅಹೋಮ್, ಖಾಮ್ತಿ, ಅನಾಮಿ, ಮುಅಂಗ್ ಮುಂತಾದ ಭಾಷೆಗಳು ಮುಖ್ಯವಾಗಿವೆ. ಇವುಗಳಲ್ಲಿ ಚೀನೀಯೆ ಬಹು ಮುಖ್ಯವಾದ ಭಾಷೆ. ಇದರಲ್ಲಿ ಸಯಾಮ್ ಚೀನ, ಇಂಡೋಚೀನ, ತೈಲೆಂಡ್ ಮುಂತಾದ ದೇಶಗಳ ಭಾಷೆಗಳು ಸೇರಿಕೊಂಡಿವೆ. ಇವುಗಳ ಲಕ್ಷಣವನ್ನು ಪರಸ್ಪರ ಹೋಲಿಸಿದಾಗ ಇವು ಹೆಚ್ಚು ಕಡಿಮೆ ಒಂದೇ ಆಗಿರುವುದು ಕಂಡುಬರುತ್ತದೆ. ಈ ಭಾಷೆಗಳನ್ನು ಕುರಿತು ಆಳವಾಗಿ ಆಲೋಚಿಸಿದಾಗ ಇವು ಆಯೋಗಾತ್ಮಕ ವರ್ಗದ ಭಾಷೆಗಳಾಗಿ ಕಂಡುಬರುತ್ತವೆ. ಮಾತ್ರವಲ್ಲದೆ, ಒಂದೇ ಪದ ಹತ್ತಾರು ಬೇರೆ ಬೇರೆ ಅರ್ಥಗಳನ್ನು ಸೂಚಿಸಬಲ್ಲ ಶಕ್ತಿಯನ್ನು ಪಡೆದುಕೊಂಡಿರುವುದು ಕಾಣುತ್ತದೆ. ಎರಡಕ್ಕಿಂತ ಹೆಚ್ಚು ಪದಗಳು ಸೇರಿ ವಿವಿಧ ವಾಕ್ಯಗಳಾಗುವ ಪರಿಪಾಟಿ ಈ ಭಾಷೆಗಳಿಗಿಲ್ಲ. ಪ್ರತಿಯೊಂದು ಪದವೂ ಸಾಮಾನ್ಯವಾಗಿ ಒಂದೇ ಅಕ್ಷರ ಉಳ್ಳದ್ದಾಗಿರುತ್ತದೆ. ಒಂದೇ ಸ್ಥಾನದಲ್ಲಿರುವ ಪದವನ್ನು ಉಚ್ಚಾರಣೆಯಲ್ಲಿ ಮಾತ್ರ ವ್ಯತ್ಯಾಸ ಮಾಡಿದರೆ ಅದು ಬೇರೆ ಬೇರೆ ಅರ್ಥವನ್ನು ಕೊಡುತ್ತದೆ. ಒಂದೇ ಪದ ಇಲ್ಲಿ ನಾಮಪದ, ಕ್ರಿಯಾಪದ, ವಿಶೇಷಣ, ಕ್ರಿಯಾವಿಶೇಷಣವಾಗಿ ಕಾರ್ಯನಿರ್ವಹಿಸಬಲ್ಲದು. ಈ ಭಾಷೆಗಳಿಗೆ ಯಾವ ಒಂದು ನಿಯಮಬದ್ಧವಾದ ವ್ಯಾಕರಣವಿದ್ದಂತಿಲ್ಲ. ಕೆಲವು ಭಾಷೆಗಳಲ್ಲಿ ವ್ಯಾಕರಣಗಳು ಇವೆಯಾದರೂ ಅವುಗಳಲ್ಲಿ ಒಂದೇ ಬಗೆಯ ನಿಯಮ ಕಂಡುಬರುವುದಿಲ್ಲ. ಈ ಭಾಷೆಗಳಲ್ಲಿ ಅನುನಾಸಿಕ ಧ್ವನಿಗಳೇ ಹೆಚ್ಚು. ಇವನ್ನು ಟಬೆಟೋ-ಬರ್ಮೀ ಭಾಷಾವರ್ಗದ ಭಾಷೆಗಳೊಡನೆ ಹೋಲಿಸಿದಾಗ ಇವು ಸ್ವಲ್ಪ ಬೇರೆಯಾಗಿ ಕಂಡುಬರುತ್ತವೆ. ಮೂಲ ಲಕ್ಷಣಗಳು ಈ ಭಾಷೆಗಳಲ್ಲಿ ಇಲ್ಲದಿದ್ದರೂ ವ್ಯಾಕರಣ ವಿಚಾರಗಳಲ್ಲಿ ಇವು ಚೀನಿ-ಸ್ಯಾಮಿ ಭಾಷೆಗಳನ್ನೇ ಹೆಚ್ಚಾಗಿ ಹೋಲುತ್ತವೆ ಎನ್ನಬಹುದು. ಈ ವರ್ಗದ ಮಂಡರಿನ್, ಪೊಂಚೊ ನಿಂಗ್‍ಪೊ ಸ್ವತೊವೆಂಚೊ, ಮೆಹಸ್ಸೀನ್ ಮುಂತಾದ ಚೀನಿ ಉಪಭಾಷೆಗಳು ಬಹುಮಟ್ಟಿಗೆ ಹೆಚ್ಚು ಪ್ರಚಾರದಲ್ಲಿವೆ.	

	ಟಿಬೆಟೊ-ಬರ್ಮೀ ಭಾಷಾವರ್ಗ: ಈ ವರ್ಗಕ್ಕೆ ಸೇರಿದ ಭಾಷೆಗಳನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು.; ಟಿಬೆಟೊ ಹಿಮಾಲಯನ್ ಭಾಷಾ ಸಮುದಾಯ, ಉತ್ತರ ಅಸ್ಸಾಮಿ ಭಾಷಾ ಸಮುದಾಯ, ಅಸ್ಸಾಮಿ-ಬರ್ಮೀ ಭಾಷಾ ಸಮುದಾಯ. ಭಾರತ, ಚೀನ, ಬರ್ಮ ಮುಂತಾದ ದೇಶಗಳಲ್ಲಿ ಈ ಭಾಷೆಗಳು ಹೆಚ್ಚಾಗಿ ಕಂಡುಬರುತ್ತವೆ. ಚೀನ ಮತ್ತು ಭಾರತದ ನಡುವೆ ಇರುವ ಟಿಬೆಟ್ಟಿನ ಕೆಲವು ಭಾಗಗಳಲ್ಲಿ ಈ ಭಾಷೆಗಳನ್ನು ಆಡುವ ಜನ ಹೆಚ್ಚಾಗಿದ್ದಾರೆ. ಈ ಭಾಷೆಗಳು ಸಾಮಾನ್ಯವಾಗಿ ಚೀನೀ-ಸ್ಯಾಮಿ ಭಾಷೆಗಳಲ್ಲಿ ಕಂಡುಬರುವ ಕೆಲವು ಲಕ್ಷಣಗಳನ್ನು ಪಡೆದಿವೆಯಾದರೂ ಈ ವರ್ಗಕ್ಕೆ ಸೇರಿದ ಕೆಲವು ಇತರ ಭಾಷಾ ಪ್ರಭಾವಗಳ ಕಾರಣದಿಂದಾಗಿ ಮೂಲ ಲಕ್ಷಣವನ್ನು ಕಳೆದುಕೊಂಡಿವೆ. ಇವುಗಳಲ್ಲಿ ಕೆಲವು ತಮ್ಮದೇ ಆದ ಸಾಹಿತ್ಯವನ್ನು ಹೊಂದಿವೆ. ಬ್ರಾಹ್ಮೀ ಮತ್ತು ಖರೋಷ್ಠಿ ಲಿಪಿಗಳ ಮೂಲಕವೇ ಈ ಭಾಷೆಗಳ ಲಿಪಿಗಳಿಗೂ ಮೂಲವಿರಬಹುದೆಂದೂ ಸುಲಭವಾಗಿ ಊಹಿಸಬಹುದು. ಚೀನ, ಸಯಾಮ್, ತೈಲೆಂಡ್ ಮುಂತಾದ ದೇಶದ ಭಾಷೆಗಳಲ್ಲಿನ ಕೆಲವು ಭಾಷೆಗಳು ಕೂಡ ಈ ಟಿಬೆಟೊ-ಬರ್ಮೀ ಭಾಷಾವರ್ಗದ ಲಕ್ಷಣವನ್ನು ಹೋಲುತ್ತವೆ.

	ಟಿಬೆಟೊ-ಬರ್ಮೀ ಭಾಷಾವರ್ಗಕ್ಕೆ ಸೇರಿದ ಭಾಷೆಗಳನ್ನು ಹೀಗೆ ವರ್ಗೀಕರಿಸಬಹುದು.
	 (ಅ) ಟಿಬೆಟೊ-ಹಿಮಾಲಯನ್ ಭಾಷಾಸಮುದಾಯ : 
1. ಪಶ್ಚಿಮೀ ವರ್ಗ : ಮುಂಚಾಟಿ, ಛಂಭಾ, ಲಾಹುಲಿ, ಬುನ್ನ, ರಂಗ್ ಲೋಯಿ, ಕನಾಶೀ, ಕಸೌರಿ, ರಂಗ್‍ಕಾಸ್, ದರ್ಮಿಯಾ, ಚೌದಂಗ್‍ಸೀ ಮುಂತಾದ ಭಾಷೆಗಳು.
2. ಪೂರ್ವೀವರ್ಗ : ಧೀಮಾಲ್, ಥಾಮೀ, ಲಿಂಬೂ, ಯಾಖಾ, ಖಂಬು, ಜಿಮ್‍ದಾರ್, ಚೆಪಾಂಗ್, ಗುರುಂಗ್, ಮರ್ಮೀ, ಸುನ್ವರ್, ನೇವಾರಿ ಇತ್ಯಾದಿ ಭಾಷೆಗಳು. 
(ಆ) ಉತ್ತರೀ ಅಸ್ಸಾಮಿ ಭಾಷಾ ಸಮುದಾಯ : ಅಕ್, ಧಫ್‍ಲಾ, ಅಬೋರ್ ಮಿರಿ ಮುಂತಾದ ಭಾಷೆಗಳು.
 (ಇ) ಅಸ್ಸಾಮಿ-ಬರ್ಮೀ ಭಾಷಾ ಸಮುದಾಯ : 
1 ಬೋಡೋನಾಗಾ : ಕಛಾರಿ, ಲಾಲುಂಗ್, ದಿಮಾಸಾ, ಗಾಕೋ, ರಾಭಾ, ತ್ರಿಪುರ ಮುಂತಾದ ಭಾಷೆಗಳು. 
2 ಅಂಗಾಮಿ-ನಾಗಾಭಾಷಾವರ್ಗ ; 
		(ಚಿ) ಪಶ್ಚಿಮೀ ವರ್ಗ : ಅಂಗಾಮೀ, ಸೇಮಾ ಮುಂತಾದ ಭಾಷೆಗಳು ಸೇರಿವೆ. 
		(b) ಮಧ್ಯ ವರ್ಗ; ಅ ಓ, ತೆನ್‍ಸ್ಸಾನಾಗ, ಮುಂತಾದ ಭಾಷೆಗಳು ಇವೆ. 
(ಛಿ) ಪೂವೀ ವರ್ಗ : ಅಂಗ್‍ವಾಂಕ್, ತಮ್ಲ, ಬಗ್‍ಪರಾ, ಮುತೋನಿಆ, ನಮ್ ಸಂಗೀಯ, ಚಾಂಗ್ ಮುಂತಾದ ಭಾಷೆಗಳು ಸೇರಿವೆ.
3 ನಾಗ ಕುಕಿ-ಚಿನ್ ಭಾಷಾ ವರ್ಗ : ಕುಕಿ, ಚಿನ್ ಮುಂತಾದ ಭಾಷೆಗಳು ಸೇರಿವೆ. 

	ಟಿಬೆಟೊ-ಬರ್ಮೀ ಭಾಷಾವರ್ಗಕ್ಕೆ ಸೇರಿದ ಎಲ್ಲ ಭಾಷೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವುಗಳಲ್ಲಿ ಚೀನೀ ಭಾಷೆಯ ಕೆಲವು ಗುಣಗಳು ಕಂಡುಬರುತ್ತವೆಯಾದರೂ ಕೆಲವು ಭಾಷೆಗಳಲ್ಲಿ ಆ ಗುಣಗಳು ಈಗ ಮಾಯವಾಗಿದೆ. ಈ ವರ್ಗದ ಕೆಲವು ಭಾಷೆಗಳು ಸಾಹಿತ್ಯ ಹಾಗೂ ಲಿಪಿ ಸೌಲಭ್ಯವನ್ನು ಪಡೆದುಕೊಂಡಿವೆ. ಹಿಮಾಲಯನ್ ಭಾಷಾಸಮುದಾಯದ ಕೆಲವು ಭಾಷೆಗಳಲ್ಲಿ ಮಾತ್ರ ಇಂಡೋಆರ್ಯನ್ ಭಾಷಾ ಪರಿವಾರದ ಕೆಲವು ಮುಖ್ಯ ಲಕ್ಷಣಗಳು ಕಂಡುಬರುತ್ತವೆ.

	ಭಾರತದ ಹಲವಾರು ಕಡೆಗಳಲ್ಲಿ ಚೀನೀ-ಟೆಬೆಟನ್ ಪರಿವಾರಕ್ಕೆ ಸೇರಿದ ಭಾಷೆಗಳನ್ನು ಆಡುವ ಜನರಿದ್ದಾರೆ. ಭಾರತ ಹಾಗೂ ಟಿಬೆಟ್ ದೇಶಗಳ ನಡುವೆ ಕಂಡುಬರುವ ಹಲವಾರು ಕಡೆಗಳಲ್ಲಿ ಚೀನೀಭಾಷೆಯನ್ನು, ಅಸ್ಸಾಮಿನ ಕೆಲವು ಕಡೆಗಳಲ್ಲಿ ಕುಕಿ, ಚಿನ್, ಅಂಗಾಮಿ, ಸೇಮಾ ಕಛಾರಿ ಮುಂತಾದ ಭಾಷೆಗಳನ್ನು ತ್ರಿಪುರ ಮುಂತಾದ ಕಡೆಗಳಲ್ಲಿ ತ್ರಿಪುರಿ, ರಾಭಾ, ಆಕ್, ಮಿರಿ ಮುಂತಾದ ಭಾಷೆಗಳನ್ನು ಹಿಮಾಲಯನ್ ಭೂಭಾಗದಲ್ಲಿ ಚಂಬಾ, ಲಾಹುಲಿ, ಕಸೌರಿ ಮುಂತಾದ ಭಾಷೆಗಳನ್ನು, ನೇಪಾಳ, ಭೂತಾನ ಮುಂತಾದ ಪ್ರದೇಶಗಳಲ್ಲಿ ಈ ವರ್ಗಕ್ಕೆ ಸೇರಿದ ಹಲವಾರು ಭಾಷೆಗಳನ್ನು-ಆಡುವ ಜನ ಅಲ್ಲಲ್ಲಿ ಕಂಡುಬರುತ್ತಾರೆ. ಹಾಗೆಯೇ ಬಾಂಗ್ಲಾ, ಪಶ್ಚಿಮಬಂಗಾಳ, ಅಸ್ಸಾಮಿನ ಹಲವಾರು ಕಡೆಗಳಲ್ಲಿ ಬರ್ಮಿಭಾಷೆಗಳನ್ನು ಆಡುವ ಜನರನ್ನು ಕಾಣಬಹದು.
(ಕೆ.ಕೆ.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ